ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ಆರೋಗ್ಯ ಸೇವಾ ಕಾರ್ಯ ಅನನ್ಯ: ರಾಷ್ಟ್ರಪತಿ ದ್ರೌಮದಿ ಮುರ್ಮು ಶ್ಲಾಘನೆ
ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ʼವಜ್ರ ಮಹೋತ್ಸವʼ ಕಾರ್ಯಕ್ರಮ
ಮೈಸೂರು,ಸೆ.1: ಕಿವುಡು ಮತ್ತು ಮೂಕರ ಆರೋಗ್ಯ ಚಿಕಿತ್ಸೆ, ಶಿಕ್ಷಣ, ವೈದ್ಯಕೀಯ ಮತ್ತು ಸಂಶೋಧನೆ ಕಾರ್ಯದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯು ಇಡೀ ದೇಶದ ಹೆಮ್ಮೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶ್ಲಾಘಿಸಿದ್ದಾರೆ.
ಮಾನಸ ಗಂಗೊತ್ರಿಯಲ್ಲಿರುವ ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.
ಇಂದೊಂದು ಐತಿಹಾಸಿಕ ಸಂದರ್ಭ 1965 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕಳೆದ 6 ದಶಕಗಳಲ್ಲಿ ಸಂವಹನ ಅಸಮರ್ಥತೆ, ಪರಿಹಾರಕ್ಕಾಗಿ ತಜ್ಞ ಮಾನವ ಸಂಪನ್ಮೂಲಗಳ ಸಹಾಯದಿಂದ ಅಪ್ರತಿಮ ಸೇವೆ ಸಲ್ಲಿಸುತ್ತಿದೆ ಎಂದರು.
ಎಲ್ಲಾ ವಯೋಮಾನದವರಿಗೂ ಬಹುಮುಖಿ ಚಿಕಿತ್ಸೆ ಮೂಲಕ ಸೇವೆ ಒದಗಿಸುತ್ತಿರುವುದು ಅಭಿನಂದನೀಯ . ಸಮುದಾಯ ಸೇವಾ ಕೇಂದ್ರಗಳು, ಟೆಲಿ ಸರ್ವೆಕ್ಷಣೆ ಇನ್ನಿತರ ಸೇವೆಗಳ ಮೂಲಕ ದೇಶದಾದ್ಯಂತ ಜನತೆಗೆ ನೆರವಾಗುತ್ತಿದೆ ಎಂದು ದ್ರೌಪದಿ ಮರ್ಮು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಈ ಸಂಸ್ಥೆಯ ನಾಯಕತ್ವವನ್ನು ಮಹಿಳೆಯರು ವಹಿಸಿರುವುದು ವಿಶೇಷವಾಗಿದೆ. ಈಗಿನ ನಿರ್ದೇಶಕಿ ಡಾ. ಪುಷ್ಪಲತಾ ಎಸ್ ಅವರು ನೀಡುತ್ತಿರುವ ಸೇವೆಯೂ ಪ್ರಶಂಸನೀಯ. ಈ ಸಂಸ್ಥೆ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.
ಆಯಿಷ್ ಸಂಸ್ಥೆ ಪ್ರಾರಂಭಕ್ಕೆ ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಭೂಮಿ ದಾನ ಮಾಡಿರುವುದು ಸ್ಮರಣೀಯ. ಇಂದು ಅವರ ಕುಟುಂಬದ ಯದುವೀರ್ ಒಡೆಯರ್ ಅವರು ಉಪಸ್ಥಿತರಿರುವುದು ಖುಷಿ ತಂದಿದೆ ಎಂದರು.
ಅಂದಾಜಿನ ಪ್ರಕಾರ 2023ರಲ್ಲಿ ಭಾರತದಲ್ಲಿ 6 ಕೋಟಿ ಜನರು ವಾಕ್ ,ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಂಬಂಧ ಕಿವುಡುತನ ತಡೆ ಮತ್ತು ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಆಯಿಷ್ ನ ಹೊಣೆಗಾರಿಕೆ ಬಹಳ ಹೆಚ್ಚಾಗಿದೆ ಎಂದು ದ್ರೌಪದಿ ಮುರ್ಮು ಹೇಳಿದರು.
ಇತರೆ ಸಮಸ್ಯೆಗಳಂತೆ ವಾಕ್ ಮತ್ತು ಶ್ರವಣ ಸಂಬಂಧಿತ ತೊಂದರೆಗಳಲ್ಲಿ ಕೂಡ ಪ್ರಾಥಮಿಕ ಹಂತದಲ್ಲಿಯೇ ಲಕ್ಷಣಗಳನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡಲು ತಜ್ಞರ ಅವಶ್ಯಕತೆ ಇದೆ ಅವರು ಅಭಿಪ್ರಾಯ ಪಟ್ಟರು.
ಆಯಿಷ್ ಆರೊಗ್ಯ ವಾಣಿ ಒಂದು ಉತ್ತಮ ಯೋಜನೆ ಆಗಿದ್ದು, ಸಂವಹನ ಅಸಮರ್ಥತೆ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಸರಳವಾಗಿ ಮಾಹಿತಿ ಲಭ್ಯವಾಗುತ್ತಿದೆ. ಈ ಮೂಲಕ ಆಯಿಷ್ ಸಂಸ್ಥೆ ರಾಷ್ಟ್ರೀಯ ನೀತಿ ರೂಪಿಸಲು ಸಹ ಸಲಹೆ ನೀಡಬಹುದು ಎಂದು ದ್ರೌಪದಿ ಮುರ್ಮು ತಿಳಿಸಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ, ವಾಕ್ ಮತ್ತು ಶ್ರವಣ ತೊಂದರೆಗಳನ್ನು ನಿವಾರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಹಳ ಮುಖ್ಯ. ಇವುಗಳ ಬಳಕೆಯಿಂದ ಸಾಮಾನ್ಯ ಜನರು ಶ್ರವಣ ಸಹಾಯಕ ಸಾಧನಗಳು ಮತ್ತು ಸಾಧನೋಪಕರಣಗಳನ್ನು ಸುಲಭವಾಗಿ ಪಡೆಯಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವೆ ಅನುಪ್ರಿಯಾ ಪಟೇಲ್, ರಾಜ್ಯ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉಪಸ್ಥಿತರಿದ್ದರು. ಆಯಿಷ್ ನಿರ್ದೇಶಕಿ ಡಾ.ಪುಷ್ಪಲತಾ ಎಸ್. ಕಾರ್ಯಕ್ರಮದಲ್ಲಿದ್ದರು.
ಸಂಜ್ಞೆ ಭಾಷೆಯನ್ನು ಪ್ರಮಾಣೀಕರಿಸುವ ಮತ್ತು ಸಮಾಜದಲ್ಲಿ ಅದರ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಮೈಸೂರು : "ಶ್ರವಣ ಮತ್ತು ಮಾತಿನ ದುರ್ಬಲತೆ ಇರುವ ಜನರಿಗೆ ಸಂಜ್ಞೆ ಭಾಷೆ ಪರಿಣಾಮಕಾರಿ ಸಂವಹನ ಸಾಧನವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಅಭಿವೃದ್ಧಿಯ ಅವಶ್ಯಕತೆಯಿದೆ. ಭಾರತೀಯ ಸಂಜ್ಞೆ ಭಾಷೆಯನ್ನು ಪ್ರಮಾಣೀಕರಿಸುವ ಮತ್ತು ಸಮಾಜದಲ್ಲಿ ಅದರ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು" ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
"'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬ ಮಂತ್ರವನ್ನು ಅರಿತುಕೊಂಡು, ಭಾರತ ಸರ್ಕಾರದ ವಿಶೇಷ ಚೇತನರ ಸಬಲೀಕರಣ ಇಲಾಖೆಯು ದೇಶದ ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ, ಎಲ್ಲರನ್ನೂ ಒಳಗೊಂಡ ಸಮಾಜದ ಸೃಷ್ಟಿಗಾಗಿ ಶ್ರಮಿಸುತ್ತಿದೆ. ಶ್ರವಣದೋಷವುಳ್ಳವರಿಗಾಗಿ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಇಲಾಖೆಯು ಜಾರಿಗೊಳಿಸುತ್ತಿದೆ ಮತ್ತು ಭಾರತೀಯ ಸಂಕೇತ ಭಾಷಾ ನಿಘಂಟನ್ನು ಸಹ ಅಭಿವೃದ್ಧಿಪಡಿಸಲಾಗಿದೆ" ಎಂದರು.