‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿ’ : ಅಹಿಂದ ಸಂಘಟನೆಗಳ ಒಕ್ಕೂಟ
ಮೈಸೂರು : ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ರಸ್ತೆ ತಡೆ ನಡೆಸಿ ಧರಣಿ ನಡೆಸಲಾಯಿತು.
ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿ ಅತಿಥಿಗೃಹದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ನೇತೃತ್ವದಲ್ಲಿ ಶನಿವಾರ ದುಂಡು ಮೇಜಿನ ಸಭೆ ನಡೆಸಿದ ಅಹಿಂದ ಸಂಘಟನೆಗಳು, ಎಐಸಿಸಿ ಸಿದ್ದರಾಮಯ್ಯ ಅವರನ್ನೇ ಪೂರ್ಣಾವಧಿವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಒಕ್ಕೋರಲಿನ ನಿರ್ಣಯ ಕೈಗೊಂಡು ಬಳಿಕ ಮೈಸೂರು-ಹುಣಸೂರು ರಸ್ತೆ ತಡೆ ನಡೆಸಿದರು.
ಇದೇ ವೇಳೆ ಕೆ.ಎಸ್.ಶಿವರಾಮ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಶೇ.63 ರಷ್ಟು ಅಹಿಂದ ವರ್ಗಗಳು ಬೆಂಬಲ ನೀಡಿವೆ. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು 5 ವರ್ಷ ಪೂರ್ಣಗೊಳಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬೇರೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದರು.
ಧರಣಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಪುಟ್ಟಸಿದ್ಧಶೆಟ್ಟಿ, ಕುಂಬಾರ ಸಮುದಾಯದ ಎಚ್.ಎಸ್.ಪ್ರಕಾಶ್, ಹುಂಡಿ ನಾಗರಾಜ್, ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್, ನಾಯಕ ಸಮುದಾಯದ ದೇವರಾಜ್ ಟಿ.ಕಾಟೂರ್, ಉಪ್ಪಾರ ಸಮುದಾಯದ ಯೋಗೇಶ್ ಉಪ್ಪಾರ್, ಅಹಿಂದ ವರ್ಗಗಳ ಕಾರ್ಯಾಧ್ಯಕ್ಷ ಶಿವಣ್ಣ, ಛಾಯಾ, ಮಂಗಳ, ಲಕ್ಷ್ಮಿ, ಸುಮತಿ, ಮಧುರ ರಾಣಿ, ರವಿನಂದನ್, ಸತ್ಯನಾರಾಯಣ ಭಾಗವಹಿಸಿದ್ದರು.