×
Ad

ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರ ಹಂಚಿಕೆ ವಿಚಾರಕ್ಕೆ ಜಾತಿ ಸಂಘರ್ಷ ಉಂಟಾಗುತ್ತಿರುವುದು ದುರದೃಷ್ಟಕರ: ಎಚ್.ವಿಶ್ವನಾಥ್

Update: 2025-11-28 14:55 IST

ಮೈಸೂರು: ಕಾಂಗ್ರೆಸ್ ಪಕ್ಷದಲ್ಲಿನ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ಸಂಘರ್ಷ ಉಂಟಾಗುತ್ತಿರುವುದು ದುರದೃಷ್ಟಕರ. ಇದಕ್ಕೆಲ್ಲಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ನೇರಕಾರಣ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಕಾಂಗ್ರೆಸ್ ಪಕ್ಷದಲ್ಲಿ ಒಳಬೇಗುದಿ ಪ್ರಾರಂಭವಾಗಿದೆ. ಪಕ್ಷಗಳ ನಡುವೆ ಸಂಘರ್ಷ ಆಗಲಿ ಆದರೆ, ಜಾತಿಗಳ ನಡುವೆ ಸಂಘರ್ಷ ಸರಿಯಲ್ಲ, ವಚನಭ್ರಷ್ಟ ಆದ ಸಂದರ್ಭದಲ್ಲಿ ಏನೆಲ್ಲಾ ಮಾತುಬರುತ್ತದೆ. ಒಂದು ಕಡೆ ಒಕ್ಕಲಿಗ ಸಮುದಾಯದ ನಿರ್ಮಲಾನಂದನಾಥಸ್ವಾಮಿ ಮಾತನಾಡಿದರೆ ಮತ್ತೊಂದೆಡೆ ಕಾಗಿನೆಲೆ ಸ್ವಾಮೀಜಿ ಮಾತನಾಡುತ್ತಾರೆ. ಇದು ಜಾತಿಗಳ ನಡುವಿನ ಸಂಘರ್ಷ ಎಂದು ಹೇಳಿದರು.

ಸಿದ್ಧರಾಮಯ್ಯ ವಚನಭ್ರಷ್ಟ ಆಗಿದ್ದರಿಂದಲೇ ಇಂತಹ ಹೇಳಿಕೆಗಳು ಬರುತ್ತಿರುವುದು. ಯತೀಂದ್ರ ಸಿದ್ಧರಾಮಯ್ಯ ನಿರ್ಮಲಾನಂದನಾಥ ಸ್ವಾಮೀಜಿ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ, ಸಿದ್ಧರಾಮಯ್ಯ ಪರ ಯತೀಂದ್ರ ಬಿಟ್ಟರೆ ಬೇರೆ ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದರು.

ಸಿದ್ಧರಾಮಯ್ಯ ಅಹಿಂದ ನಾಯಕ ಎಂದು ಹೇಳಿಕೊಂಡೆ ಅಹಿಂದ ಸಮುದಾಯವರನ್ನು ಮುಗಿಸಿಬಿಟ್ಟರು. ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡ ಬಂದವರನ್ನು ಮುಗಿಸಿದರು, ಅಹಿಂದ ನಾಯಕರಿಗೆ ಪೆಟ್ಟುಕೊಟ್ಟು ಪ್ರಭಾವಿ ನಾಯಕರಾದರು. ಬಾದಾಮಿಯಲ್ಲಿ ಬಿ.ಬಿ.ಚಿಮ್ಮನಕಟ್ಟಿಗೆ ಟಿಕೆಟ್ ತಪ್ಪಿಸಿ ಆತನನ್ನು ಮುಗಿಸಿದರು. 2014 ರಲ್ಲಿ ಪ್ರತಾಪ್ ಸಿಂಹನಿಗೆ ಸಪೋರ್ಟ್ ಮಾಡಿ ನನ್ನ ಸೋಲಿಗೆ ಕಾರಣರಾದರು, ಯಡಿಯೂರಪ್ಪ ಪುತ್ರ ವಿಜಯೇಂದ್ರನ ವಿರುದ್ಧ ಕುರುಬ ಸಮುದಾಯದ ಹುಡುಗನಿಗೆ ಟಿಕೆಟ್ ತಪ್ಪಿಸಿ ವಿಜಯೇಂದ್ರ ಗೆಲುವಿಗೆ ಸಹಕರಿಸಿದರು.‌ಇವರು ಯಾವ ಅಹಿಂದ ನಾಯಕ? ಕೃತ‌ಜ್ಞತೆಯೇ ಇಲ್ಲದ ಹೀನ ನಾಯಕ ಎಂದು ವಾಗ್ದಾಳಿ ನಡೆಸಿದರು.

1978 ರ ಲೋಕಸಭೆಯಲ್ಲಿ ಸೋತ ನಿಮಗೆ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಂಬಲ ನೀಡಿದ್ದು, ಮಾಜಿ ಶಾಸಕ ಕೆಂಪೀರೇಗೌಡ, ಜಿ.ಟಿ.ದೇವೇಗೌಡ, ಮಾವಿನಹಳ್ಳಿ ಸಿದ್ಧೇಗೌಡ, ನಂತರ ನೀವು ಸಚಿವರಾಗಲು ಮಾಜಿ ಪ್ರಧಾನಿ ಎಚ್.ಡಿ‌.ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಕಾರಣರಾದರು. 1994 ರಲ್ಲಿ ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಎಚ್.ಡಿ.ದೇವೇಗೌಡರು, ಬಹಳಷ್ಟು ರೀತಿ ಒಕ್ಕಲಿಗ ಸಮುದಾಯ ಕುರುಬ ಸಮುದಾಯಕ್ಕೆ ಸಹಾಮಾಡಿದೆ ಎಂದು ಹೇಳಿದರು.

"ನಿಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಡಿ.ಕೆ.ಶಿವಕುಮಾರ್ ಐದು ಪುಟಗಳ ಪತ್ರ ಬರೆದಿದ್ದಾರೆ. ಎಸ್.ಎಂ.ಕೃಷ್ಣ, ಬಿ.ಎಲ್.ಶಂಕರ್ ಸಪೋಟ್೯ ಮಾಡಿದ್ದಾರೆ. ಈಗ ಅಂತಹ ಡಿ.ಕೆ.ಶಿವಕುಮಾರ್ ಅವರಿಗೆ ಕೈ ಕೊಡುವುದು ಒಳ್ಳೆಯದಲ್ಲ ಸಿದ್ಧರಾಮಯ್ಯ" ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಕಟ್ಟರ್ ಕಾಂಗ್ರೆಸ್ಸಿಗ, ಅವರಿಗೆ ಅಧಿಕಾರ ಹಸ್ತಾಂತರ ಆಗಬೇಕು, ಅಧಿಕಾರದ ಹಪಾಹಪಿತನದಿಂದ ಹೊರ ಬಂದು ಅವರಿಗೆ ಅಧಿಕಾರ ಕೊಡಿ ಎಂದು ಎಚ್.ವಿಶ್ವನಾಥ್ ಒತ್ತಾಯಿಸಿದರು.

ಕೊಟ್ಟ ಮಾತಿನಂತೆ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಿ, ಎರಡೂವರೆ ವರ್ಷದ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡುತ್ತೇನೆ ಎಂದು ಹೇಳಿಲ್ಲ ಎಂದು ಚಾಮುಂಡಿ ಬೆಟ್ಟಕ್ಕೆ ಬಂದು ಹೇಳು ನೋಡೋಣ ಎಂದು ಸವಾಲು ಹಾಕಿದರು.


ಡಿ.ಕೆ.ಶಿವಕುಮಾರ್ ರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಪತ್ರ ಬರೆಯಲ್ಲ: ಎಚ್.ವಿಶ್ವನಾಥ್

ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಏನು ಬರೆಯಲ್ಲ ಮಾತಿನಲ್ಲೇ ಒತ್ತಾಯ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀವು ಪತ್ರ ಬರೆಯುತ್ತೀರ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇನು ಪತ್ರ ಬರೆದು ಒತ್ತಾಯ ಮಾಡಲ್ಲ, ಮಾತಿನಲ್ಲೇ ಮತ್ತು ಮಾಧ್ಯಮಗಳ ಮೂಲಕ ಒತ್ತಾಯ ಮಾಡುತ್ತೇನೆ. ಗುಪ್ತಚರ ಇಲಾಖೆ ಇದೆ.‌ಕೆಲವು ಮಾಹಿತಿದಾರರಿಂದ ಅವರೇ ಇಲ್ಲಿನ ಆಗುಹೋಗುಗಳನ್ನು ತರಿಸಿಕೊಳ್ಳುತ್ತಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News