ಸರಕಾರ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಲಿ; ನಿವೃತ್ತ ನ್ಯಾಯಾಧೀಶರು, ಚಿಂತಕರು, ಪರಿಸರವಾದಿಗಳ ಆಗ್ರಹ
ಬೆಂಗಳೂರು, ಅ.11: ಜನರನ್ನು ಕತ್ತಲೆಯಲ್ಲಿಟ್ಟು ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಹಾಗಾಗಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರಾಜ್ಯ ಸರಕಾರ ಕೈಬಿಡಬೇಕು ಎಂದು ನಿವೃತ್ತ ನ್ಯಾಯಾಧೀಶರು, ಚಿಂತಕರು, ಪರಿಸರ ವಾದಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಶನಿವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅಪಾಯಗಳೇನು? ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಸೇರಿದಂತೆ ಚಿಂತಕರು, ಪರಿಸರವಾದಿಗಳು ಸೇರಿದಂತೆ ಪ್ರಮುಖರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕವಾಗಿದ್ದು, ಕಣಿವೆ ಪ್ರದೇಶವನ್ನು ನಾಶಗೊಳಿಸಲು ಸರಕಾರ ಮುಂದಾಗಿದೆ. ಅವೈಜ್ಞಾನಿಕವಾಗಿರುವ ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಮತ್ತು ಪರಿಸರ ನೀತಿ ವಿಶ್ಲೇಷಕ ಶಂಕರ ಶರ್ಮಾ ವಿಷಯ ಪ್ರಸ್ತಾಪಿಸಿ, ಶರಾವತಿ ಮತ್ತು ವಾರಾಹಿ ಈ ಎರಡು ಯೋಜನೆಗಳು ಕಾನೂನುಬದ್ಧವಾಗಿ ಅಧಿಸೂಚಿತ ವನ್ಯಜೀವಿ ಅಭಯಾರಣ್ಯಗಳೊಳಗೆ ಬರುವುದರಿಂದ ಇವು 1972ರ ವನ್ಯಜೀವಿ ಕಾಯ್ದೆಯ 29ನೆ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದರು.
ಪರಿಸರ ಲೇಖಕ, ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ಮಾತನಾಡಿ, ಶರಾವತಿ ಈ ಯೋಜನೆ ಭೂಕುಸಿತಕ್ಕೆ ಒಳಪಟ್ಟು ಸದಾಕಾಲ ಹಸಿರಾಗಿರುವ ಅರಣ್ಯ ಪ್ರದೇಶಗಳಲ್ಲಿ ಪ್ರಸ್ತಾವಗೊಂಡಿದ್ದು, ಭಾರತದ ಇಂಗಾಲವನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ಸಂಪನ್ಮೂಲಗಳ ಮತ್ತು ಜೀವ ವೈವಿಧ್ಯತಾಣಗಳು. ಈ ಅರಣ್ಯಗಳು ಸಿಂಹಬಾಲದ ಸಿಂಗಳೀಕೆಗಳು ಸೇರಿದಂತೆ ಅನೇಕ ಅಪಾಯದ ಅಂಚಿನಂನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ವಾಸಸ್ಥಾನವಾಗಿದೆ ಎಂದು ಮಾಹಿತಿ ನೀಡಿದರು.
ಹೋರಾಟಗಾರ್ತಿ, ಸಂಶೋಧಕಿ ನಿರ್ಮಾಲಗೌಡ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಂದ ಉಂಟಾಗುವ ಅರಣ್ಯ ನಾಶ, ನದಿ ವ್ಯವಸ್ಥೆಯ ಅಸ್ತವ್ಯವಸ್ಥತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಪರಿಸರಕ್ಕೆ ಭರಿಸಲಾಗದ ಮಟ್ಟದ ಹಾನಿ ಉಂಟಾಗುತ್ತದೆ. ಹಾಗಾಗಿ ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.
ಈ ವೇಳೆ ಬೇಲಿಮಠದ ಶಿವರುದ್ರ ಸ್ವಾಮೀಜಿ, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ರೈತ ಮುಖಂಡರಾದ ಸುನಂದಾ ಜಯರಾಂ ಸೇರಿದಂತೆ ಪ್ರಮುಖರಿದ್ದರು.
ನಿರ್ಣಯ
*ಭಾರತದ ಹವಾಮಾನ ಮತ್ತು ಇಂಧನ ಗುರಿಗಳನ್ನು ಸ್ಥಳೀಯ, ವಿಕೇಂದ್ರೀಕೃತ ಹಾಗೂ ಪರಿಸರಪರ ರ್ಯಾಯಗಳ ಮೂಲಕ ಸಾಧಿಸಬೇಕು-ಪ್ರಕೃತಿಯ ನೆಲೆಯನ್ನು ಬಲಪಡಿಸುವಂತಿರಬೇಕು.
* ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ತಕ್ಷಣ ಸಂರಕ್ಷಿತ ಪ್ರದೇಶಗಳಿಂದ ಹಿಂತೆಗೆದುಕೊಳ್ಳಬೇಕು.
*ಭವಿಷ್ಯದ ನವೀಕರಿಸಬಹುದಾದ ಇಂಧನ ಯೋಜನೆಗಳು ಪರಿಸರ ಮಿತಿಗಳು, ಕಾನೂನು ರಕ್ಷಣಾ ನಿಯಮಗಳು ಗೌರವಿಸುವ ರೀತಿಯಲ್ಲಿ ರೂಪಗೊಳ್ಳಬೇಕು.
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಜೀವವೈವಿಧ್ಯತೆಗೆ ಧಕ್ಕೆ ತರುತ್ತಿದ್ದು, ಮುಂಬರುವ ಪೀಳಿಗೆಗೆ ಪ್ರಕೃತಿಯನ್ನು ಉಳಿಸಬೇಕು. ಯಾವುದೇ ಕಾರಣಕ್ಕೂ ಪರಿಸರ ನಾಶ ಮಾಡುವ ಯೋಜನೆಗೆ ಪರವಾನಿಗೆ ನೀಡಬಾರದು. ಈ ಯೋಜನೆ ಕೈಬಿಡುವವರೆಗೆ ನಿರಂತರ ಹೋರಾಟ ಮಾಡಲಾಗುವುದು’
-ಎನ್.ಸಂತೋಷ್ ಹೆಗಡೆ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ