ಸಚಿವ ಝಮೀರ್ ಸಂಭಾಷಣೆ ವೈರಲ್: ರಾಜೀನಾಮೆಗೆ ಜೆಡಿಎಸ್ ಆಗ್ರಹ
ಬೆಂಗಳೂರು : ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿ ಪರವಾಗಿ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಪೊಲೀಸರ ಮೇಲೆ ಒತ್ತಡ ತಂದಿದ್ದು, ಈ ಕೂಡಲೇ ಸರಕಾರ ಅವರ ರಾಜೀನಾಮೆ ಪಡೆಯಲಿ ಎಂದು ಜೆಡಿಎಸ್ ಪಕ್ಷ ಆಗ್ರಹಿಸಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆಯುವ ಸಚಿವ ಝಮೀರ್ ಅಹ್ಮದ್ ನಿಮಗೆ ನಾಚಿಕೆಯಾಗಬೇಕು ಎಂದು ಟೀಕಿಸಿದೆ.
ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ಶಿಫಾರಸು ಮಾಡಿರುವುದು ಅಕ್ಷಮ್ಯ. ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ ಎಂದು ಪ್ರಶ್ನಿಸಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು, ಪೊಲೀಸ್ ಇಲಾಖೆ ಕೆಲಸ ಮಾಡುತ್ತಿಲ್ಲ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಈ ಕೂಡಲೇ ಸಚಿವ ಝಮೀರ್ ಅಹ್ಮದ್ ಖಾನ್ ರಾಜೀನಾಮೆ ಪಡೆಯಿರಿ ಎಂದು ಜೆಡಿಎಸ್ ಒತ್ತಾಯಿಸಿದೆ.