×
Ad

ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟೀಸ್ ವಿರುದ್ಧ ಜು.24ರಂದು ಬೇಕರಿ, ಸಣ್ಣ ಉದ್ದಿಮೆದಾರರಿಂದ ಪ್ರತಿಭಟನೆ

Update: 2025-07-22 19:14 IST

ಬೆಂಗಳೂರು : ಸಣ್ಣ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಕಳುಹಿಸಿರುವ ಜಿಎಸ್‍ಟಿ ನೋಟಿಸ್‍ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ದಿಮೆದಾರರ ಒಕ್ಕೂಟದ ವತಿಯಿಂದ ಗುರುವಾರ(ಜು.24) ನಗರದ ಫ್ರೀಡಂಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ.ಬಿ.ಪ್ರತಾಪ್ ಶೆಟ್ಟಿ ಹೇಳಿದ್ದಾರೆ.

ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಟೆಡ್ ಅಕೌಂಟೆಂಟ್‍ಗಳ ಸಲಹೆ ಪಡೆದುಕೊಂಡು ಮುಂದುವರೆಯಿರಿ ಎಂದು ಹೇಳುವುದು ಸುಲಭ. ಆದರೆ ಬಡ ವರ್ತಕನ ಕೈಯಲ್ಲಿ ಅವರು ಕೇಳುವಷ್ಟು ಹಣ ಕೊಡಲು ಸಾಧ್ಯವಾಗುವುದಿಲ್ಲ. ಹಿಂದಿನ ನಾಲ್ಕು ವರ್ಷಗಳ ಉದ್ಯಮೇತರ ಬಿಲ್‍ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂಬ ಅರಿವೇ ವರ್ತಕರಿಗೆ ಇಲ್ಲವೆಂದ ಮೇಲೆ, ದಾಖಲೆಗಳನ್ನು ತಂದು ತೆರಿಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಇಲಾಖೆ ಹೇಳುತ್ತಿರುವುದು ವಂಚನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಪುಂಡರ ಕಾಟ ಅತ್ಯಧಿಕವಾಗಿದ್ದು, ಸಣ್ಣಪುಟ್ಟ ವ್ಯಾಪಾರಿಗಳ ಬಳಿ ಸಾಲ ಮಾಡಿ ಮರುಪಾವತಿಸುತ್ತಿಲ್ಲ. ನಮ್ಮಲ್ಲಿ ಕೆಲಸ ಮಾಡುವ ಶೇ.70ರಷ್ಟು ಜನರು ಉಬ್ಬಿದ ರಕ್ತನಾಳ ಮತ್ತಿತರೆ ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಟೀ, ಕಾಫಿ, ಸಿಗರೇಟು, ಪಾನ್ ಮಸಾಲೆ ಮಾರಾಟಕ್ಕೆ ಪೊಲೀಸರ ಉಪಟಳ ಹೆಚ್ಚಾಗಿದ್ದು, ಉತ್ಪಾದಕರನ್ನು ಬಿಟ್ಟು ವಿನಾಕಾರಣ ನಮ್ಮನ್ನು ಗುರಿಯಾಗಿಸಿಕೊಂಡು ದಂಡ ವಿಧಿಸುತ್ತಿದ್ದಾರೆ ಎಂದು ಪ್ರತಾಪ್ ಶೆಟ್ಟಿ ಹೇಳಿದರು.

ಒಕ್ಕೂಟದ ಸಲಹೆಗಾರ ಅಭಿಲಾಷ್ ಶೆಟ್ಟಿ ಮಾತನಾಡಿ, ಡಿಜಿಟಲ್ ಇಂಡಿಯಾ ಯಶಸ್ವಿಯಾಗಲು ದೇಶದ ಸಣ್ಣ ಉದ್ದಿಮೆದಾರರೇ ಕಾರಣ. ಅವರಿಗೆ ಹಿಂದಿನ ವರ್ಷಗಳಲ್ಲಿ ಜಿಎಸ್‍ಟಿ ಮಿತಿಯ ಕುರಿತು ಯಾವುದೇ ಅರಿವು ಮೂಡಿಸಿಲ್ಲ. ಸರಿಯಾದ ಸಮಯಕ್ಕೆ ನೋಟಿಸ್ ನೀಡಿದ್ದರೆ ತೆರಿಗೆ ಪಾವತಿಸುತ್ತಿದ್ದರು. ನಾಲ್ಕು ವರ್ಷಗಳಿಂದ ಇದರ ಬಗ್ಗೆ ಸುಳಿವು ಕೊಡದೇ, ಲಕ್ಷಾಂತರ ರೂಪಾಯಿಗಳ ನೋಟಿಸ್ ಕೊಟ್ಟಿರುವುದರಿಂದ ಅನೇಕರು ಹೆದರಿ ಊರುಬಿಟ್ಟು ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಣ್ಣ ವರ್ತಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ವಾಣಿಜ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಸಮನ್ವಯದಿಂದ ನಮ್ಮ ಅಹವಾಲುಗಳಿಗೆ ಸ್ಪಂದಿಸಿ, ನೋಟಿಸ್‍ಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ವಿರುದ್ಧ ರಾಜ್ಯವ್ಯಾಪಿ ಹೋರಾಟ ನಡೆಸಿ, ಯುಪಿಐ ಕ್ಯೂಆರ್ ಕೋಡ್‍ಗಳ ಸ್ಟಿಕ್ಕರುಗಳನ್ನು ಹರಿದು ಹಾಕುವ ಅಭಿಯಾನ ನಡೆಸುತ್ತೇವೆ ಎಂದು ಅಭಿಲಾಷ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲೆ ಶಕುಂತಲಾ ಶೆಟ್ಟಿ, ಗೀತಾ ಶೆಟ್ಟಿ, ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News