×
Ad

ಕಾರ್ಲ್ಸ್‌ ಬರ್ಗ್‍ನ 350 ಕೋಟಿ ರೂ.ಹೂಡಿಕೆ ಒಪ್ಪಂದದ ಪ್ರಗತಿ ಪರಿಶೀಲಿಸಿದ ಎಂ.ಬಿ.ಪಾಟೀಲ್

Update: 2025-06-21 21:55 IST

ಬೆಂಗಳೂರು : ಬಿಯರ್ ಮತ್ತು ಇತರ ಪಾನೀಯ ತಯಾರಿಸುವ ಡೆನ್ಮಾರ್ಕ್‍ನ ಜಾಗತಿಕ ಕಂಪನಿ ಕಾರ್ಲ್ಸ್‌ ಬರ್ಗ್ ಗ್ರೂಪ್, ರಾಜ್ಯದಲ್ಲಿ 350 ಕೋಟಿ ರೂ. ಬಂಡವಾಳ ಹೂಡಿಕೆಗೆ ಮಾಡಿಕೊಂಡಿರುವ ಒಪ್ಪಂದದ ಪ್ರಗತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪರಿಶೀಲಿಸಿದ್ದಾರೆ.

ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ಡೆನ್ಮಾರ್ಕ್‍ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಅವರು, ಕಂಪನಿಯ ಸಿಇಒ ಜಾಕೊಬ್ ಆರಪ್ ಆ್ಯಂಡರ್ಸನ್ ಅವರನ್ನು ಭೇಟಿಯಾಗಿ ಫಲಪ್ರದ ಮಾತುಕತೆ ನಡೆಸಿದರು. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿಯು ಸಹಿ ಹಾಕಿದ್ದ 350 ಕೋಟಿ ರೂ. ಹೂಡಿಕೆ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಿದರು.

ಕಾರ್ಲ್ಸ್‌ಬರ್ಗ್ ಸೇರಿದಂತೆ ಕೆಕೆ ವಿಂಡ್ ಸೊಲುಷನ್ಸ್, ನೊವೊನೆಸಿಸ್, ನೊವೊ ನಾರ್ಡಿಸ್ಕ್, ಡೆನ್ಮಾರ್ಕ್ ಕೈಗಾರಿಕಾ ಒಕ್ಕೂಟ (ಡಿಐ) ಮತ್ತು ಭಾರತ ಹಾಗೂ ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘ (ಐಡಿಸಿಸಿ) ಜೊತೆ ಸರಣಿಯೋಪಾದಿ ಸಭೆ ನಡೆಸಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಡೆನ್ಮಾರ್ಕ್ ಉದ್ಯಮ ದಿಗ್ಗಜರಿಗೆ ಎಂ.ಬಿ.ಪಾಟೀಲ್ ಮನವರಿಕೆ ಮಾಡಿಕೊಟ್ಟರು.

ಎಲೆಕ್ಟ್ರಾನಿಕ್ಸ್ ಮತ್ತು ಪ್ಲಾಟ್‍ಫಾರ್ಮ್ ಸಿಸ್ಟಮ್ಸ್ ವಿಭಾಗದಲ್ಲಿ ರಾಜ್ಯದಲ್ಲಿನ ತನ್ನ ಉತ್ಪನ್ನಗಳ ತಯಾರಿಕೆ ವಿಸ್ತರಿಸಲು ಅವರು, ಕೆಕೆ ವಿಂಡ್ ಸೊಲುಷನ್ಸ್‌ ಗೆ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರದ ಬೆಂಬಲ, ಸಹಕಾರಕ್ಕೆ ಕಂಪನಿಯು ತೃಪ್ತಿ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ (ಕ್ವಿನ್ ಸಿಟಿ) ಯೋಜನೆಯಲ್ಲಿ ಭಾಗಿಯಾಗಲು ನೊವೊನೆಸಿಸ್ ಆಸಕ್ತಿ ವ್ಯಕ್ತಪಡಿಸಿದೆ. ರಾಜ್ಯದಲ್ಲಿನ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಪನಿಯ ತಯಾರಿಕಾ ಸಾಮಥ್ರ್ಯ ವಿಸ್ತರಿಸಲು ಎಂ.ಬಿ.ಪಾಟೀಲ್ ಆಹ್ವಾನ ನೀಡಿದ್ದಾರೆ. ಅಲ್ಲದೇ, ಔಷಧಿ ತಯಾರಿಕೆಯ ಜಾಗತಿಕ ಪ್ರಮುಖ ಕಂಪನಿ ನೊವೊ ನಾರ್ಡಿಸ್ಕ್ ಜೊತೆಗಿನ ಸಭೆಯಲ್ಲಿ ಅವರು, ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಮನವಿ ಮಾಡಿಕೊಂಡಿದ್ದಾರೆ.

ಡೆನ್ಮಾರ್ಕ್ ಕೈಗಾರಿಕಾ ಒಕ್ಕೂಟ (ಡಿಐ) ಮತ್ತು ಭಾರತ- ಡೆನ್ಮಾರ್ಕ್ ವಾಣಿಜ್ಯೋದ್ಯಮ ಸಂಘದ (ಐಡಿಸಿಸಿ) ಪದಾಧಿಕಾರಿಗಳನ್ನು ಭೇಟಿಯಾದ ರಾಜ್ಯದ ನಿಯೋಗವು ಬಂಡವಾಳ ಹೂಡಿಕೆ ಉತ್ತೇಜನೆಗೆ ಸಾಂಸ್ಥಿಕ ಪಾಲುದಾರಿಕೆ ಸಾಧ್ಯತೆಗಳನ್ನು ಚರ್ಚಿಸಿತು.

ವಾಣಿಜ್ಯ ಬಾಂಧವ್ಯ ವೃದ್ಧಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ಎಂ.ಬಿ.ಪಾಟೀಲ್, ‘ಐಡಿಸಿಸಿ’ಗೆ ಆಹ್ವಾನ ನೀಡಿದರು. ರೋಡ್‌ನ ಷೋನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಇಂಜಿನಿಯರ್ ವೀರಭದ್ರಯ್ಯ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News