ದೇಶದಲ್ಲಿ 940 ಮಿಲಿಯನ್‍ಗೆ ತಲುಪಿದ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ: ಜ್ಯೋತಿರಾದಿತ್ಯ ಸಿಂಧ್ಯಾ
ಬೆಂಗಳೂರು : ದಶಕಗಳ ಹಿಂದೆ ದೇಶದಲ್ಲಿ 60 ಮಿಲಿಯನ್ ಇದ್ದ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ ಇಂದು 940 ಮಿಲಿಯನ್‍ಗೆ ತಲುಪಿದೆ. ಹೀಗಾಗಿ ನಾವು ತಂತ್ರಜ್ಞಾನ ಕ್ಷೇತ್ರದ ಬೆಳೆವಣಿಗೆ ಜೊತೆಗೆ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ 6ಜಿ ಬರಲಿದೆ ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ನಾಗರಬಾವಿಯ ವಿಟಿಯು-ವಿ.ಆರ್.ಐ.ಎಫ್- ಟಿ.ಸಿ.ಓ.ಇ ಹಬ್ ಅಂಡ್ ಸ್ಪೋಕ್ ಸೆಂಟರ್ ಆಫ್ ಎಕ್ಸೆಲೆನ್ಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಹನ್ನೊಂದು ವರ್ಷದ ಹಿಂದೆ ಮೊಬೈಲ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ರಫ್ತು ಮಾಡುತ್ತೇವೆ. ಇನ್ನು 4ಜಿ ಟೆಕ್ನಾಲಜಿಯಲ್ಲಿ ಜಗತ್ತಿನ 5ನೇ ಸ್ಥಾನವನ್ನು ನಮ್ಮ ದೇಶವು ಪಡೆದಿದೆ ಎಂದು ತಿಳಿಸಿದರು.
ವಿಟಿಯು ವ್ಯಾಪ್ತಿಯಲ್ಲಿರುವ 210ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿದ್ದು, 20 ಸಾವಿರಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು, 4 ಲಕ್ಷಕ್ಕೂ ಹೆಚ್ಚಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರನ್ನು ಹೊಂದಿದೆ. ಈ ವಿಶ್ವವಿದ್ಯಾಲಯದಲ್ಲಿ ಉದಯೋನ್ಮುಖ ಕ್ಷೇತ್ರಗಳಾದ 5ಜಿ, 6ಜಿ ಕಮ್ಯೂನಿಕೇಷನ್, ಕೃತಕ ಬುದ್ಧಿಮತ್ತೆ(ಎಐ), ಮಷಿನ್ ಲರ್ನಿಂಗ್ (ಎಂಎಲ್), ಆಗ್ಮೆಟೆಂಡ್ ಅಂಡ್ ವರ್ಚುವಲ್ ರಿಯಾಲಿಟಿ (ಎಆರ್. ವಿಆರ್), ಕ್ವಾಟಂ ಕಂಪ್ಯೂಟಿಂಗ್, ಹೆಲ್ತ್ ಕೇರ್ ಮತ್ತು ಇತರೆ ಪ್ರಮುಖ ತಂತ್ರಜ್ಞಾನದ ಕುರಿತು ಸಂಶೋಧನೆ ನಡೆಯುತ್ತಿರುವುದು ಸಂತಸದ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.
ಕೌಶಲ್ಯಾಭಿವೃದ್ಧಿ ಜೀವನೋಪಾಯ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಮಾತನಾಡಿ, ಈ ಕೇಂದ್ರವನ್ನು ವಿಟಿಯು 1 ಲಕ್ಷ ಚದರ ಅಡಿಯಲ್ಲಿರುವ ವಿಶಾಲವಾದ ಕೇಂದ್ರದಲ್ಲಿ ನಿರ್ಮಾಣ ಮಾಡಿದೆ. ಇದು ಸಂಶೋಧನೆ ಮತ್ತು ನವೋದ್ಯಮ, ಭವಿಷ್ಯದ ಪೀಳಿಗೆ ತಂತ್ರಜ್ಞಾನಕ್ಕೆ ಸಾಮರ್ಥ್ಯ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿ ಕೊಟ್ಟಿದೆ. ಇದು ಹೊಸ ಸಂಶೋಧನಾ ಕೇಂದ್ರವಾಗಿದ್ದು, ಹಲವು ಕಂಪನಿಗಳು ಸ್ಟಾರ್ಟ್ ಆಪ್ ಆರಂಭಿಸಬಹುದು. ಇದಕ್ಕೆ ಬೇಕಾದ ಸೌಲಭ್ಯವನ್ನು ನಾವು ನೀಡುತ್ತೇವೆ ಎಂದು ತಿಳಿಸಿದರು.
ಹಬ್ ಅಂಡ್ ಸ್ಪೋಕ್: ರಾಷ್ಟ್ರೀಯ ನಾವೀನ್ಯತೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಈ ಕೇಂದ್ರವು ವಿಟಿಯುನ ವಿಸ್ತಾರವಾದ ಶೈಕ್ಷಣಿಕ ಜಾಲವನ್ನು ಬಳಕೆ ಮಾಡಿಕೊಳ್ಳಲಿದೆ. ವಿಶ್ವೇಶ್ವರಯ್ಯ ತಾಂತ್ರಿಕಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 210ಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಿದ್ದು, 20 ಸಾವಿರಕ್ಕೂ ಹೆಚ್ಚು ಪಿಎಚ್.ಡಿ ಪದವೀಧರರು, 4 ಲಕ್ಷಕ್ಕೂ ಹೆಚ್ಚಿನ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಈ ಸಂಶೋಧನಾ ಮತ್ತು ನಾವೀನ್ಯತೆ ಕೇಂದ್ರದ ಸದ್ಭಳಕೆ ಮಾಡಿಕೊಳ್ಳಲಿದ್ದಾರೆ.