12,936 ಕೋಟಿ ರೂ.ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದ ಎಕಗವಾಕ್ಷಿ ಸಂಸ್ಥೆ

Update: 2026-07-30 01:31 IST

ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಯೋಜನೆಗಳ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ (ಎಸ್‍ಎಲ್‍ಎಸ್‍ಡಬ್ಲ್ಯುಎ) ಸಭೆಯಲ್ಲಿ ಒಟ್ಟು ಅಂದಾಜು 12,936.86ಕೋಟಿ ರೂ.ವೆಚ್ಚದ ಏಳು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪರಿಗಣಿಸಲಾಯಿತು.

ಈ ಯೋಜನೆಗಳು ಪ್ರವಾಸೋದ್ಯಮ, ಆತಿಥ್ಯ, ಜಲ ಸಾರಿಗೆ, ಮೂಲಸೌಕರ್ಯ, ತೋಟಗಾರಿಕೆ, ಚಲನಚಿತ್ರ ಹಾಗೂ ನಗರ ಸಾರಿಗೆ ಕ್ಷೇತ್ರಗಳನ್ನು ಒಳಗೊಂಡಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಪ್ರಸ್ತಾಪಿಸಲಾಗಿದೆ.

ರಾಜ್ಯ ಸರಕಾರವು ಪಿಪಿಪಿ ಯೋಜನೆಗಳಿಗಾಗಿ ರೂಪಿಸಿರುವ ಸಾಂಸ್ಥಿಕ ವ್ಯವಸ್ಥೆಯಡಿ, 500 ಕೋಟಿ ರೂ.ವರೆಗಿನ ಯೋಜನೆಗಳನ್ನು ಪರಿಶೀಲಿಸಿ ಅನುಮೋದಿಸುವ ಅಧಿಕಾರ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಗಿದೆ. 500 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಯೋಜನೆಗಳನ್ನು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಪರಿಶೀಲಿಸಿ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿರುವ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಗೆ ಪರಿಗಣನೆ ಮತ್ತು ಅನುಮೋದನೆಗಾಗಿ ಶಿಫಾರಸು ಮಾಡುತ್ತದೆ.

ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ ನಿರ್ಧಾರಗಳು: 500 ಕೋಟಿ ರೂ.ವರೆಗಿನ ಅಂದಾಜು ವೆಚ್ಚ ಹೊಂದಿರುವ ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ 285.43 ಕೋಟಿ ರೂ.ಆಗಿದೆ.

ಮಂಗಳೂರಿನಲ್ಲಿ ಲೈಟ್ ಹೌಸ್ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಅಭಿವೃದ್ಧಿ-60 ಕೋಟಿ ರೂ.ಗಳು.

ಗುರುಪುರ ನದಿ ದ್ವೀಪಗಳು-ಉತ್ತರ ಭಾಗ-59.14 ಕೋಟಿ ರೂ,, ಗುರುಪುರ ನದಿ ದ್ವೀಪಗಳು-ದಕ್ಷಿಣ ಭಾಗ-66.29 ಕೋಟಿ ರೂ., ಊಟಿಯ ಫರ್ನ್ ಹಿಲ್‍ನಲ್ಲಿರುವ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನದಲ್ಲಿ ಸಂದರ್ಶಕರ ಸೌಲಭ್ಯಗಳ ಅಭಿವೃದ್ಧಿ-100 ಕೋಟಿ ರೂ.ಗಳ ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಲಿವೆ.

500 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಕೆಳಕಂಡ ಮೂರು ಯೋಜನೆಗಳನ್ನು ಈ ಸಮಿತಿಯು ಪರಿಶೀಲಿಸಿ, ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಪರಿಗಣನೆ ಮತ್ತು ಅನುಮೋದನೆಗಾಗಿ ಶಿಫಾರಸು ಮಾಡಿದೆ. ಈ ಮೂರು ಯೋಜನೆಗಳ ಒಟ್ಟು ಅಂದಾಜು ಹೂಡಿಕೆ 12,651.43 ಕೋಟಿ ರೂ.ಆಗಿದೆ.

ಮೈಸೂರಿನಲ್ಲಿ ಅಂತರ್‍ರಾಷ್ಟ್ರೀಯ ಚಲನಚಿತ್ರ ನಗರಿ ಅಭಿವೃದ್ಧಿ-729.43 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ಮಾಂಕಿ ಬಂದರಿನಲ್ಲಿ ಬಹುಉದ್ದೇಶ ಬಂದರು ಮತ್ತು ಹಡಗು ನಿರ್ಮಾಣ ಘಟಕದ ಅಭಿವೃದ್ಧಿ-6,925 ಕೋಟಿ ರೂ., ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರ್ ಅಭಿವೃದ್ಧಿ-4,997 ಕೋಟಿ ರೂ.ಗಳು.

ಪ್ರಸ್ತಾವಿತ ಪಿಪಿಪಿ ಯೋಜನೆಗಳು ಆಧುನಿಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ, ಖಾಸಗಿ ವಲಯದ ಹೂಡಿಕೆ ಆಕರ್ಷಣೆ, ಪ್ರವಾಸೋದ್ಯಮ ಮತ್ತು ನಗರ ಸೇವೆಗಳ ಸುಧಾರಣೆ, ಕರ್ನಾಟಕದ ಸಾಗರ ಮತ್ತು ಲಾಜಿಸ್ಟಿಕ್ಸ್ ಸಾಮಥ್ರ್ಯ ಬಲವರ್ಧನೆ ಹಾಗೂ ರಾಜ್ಯಾದ್ಯಂತ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗಲಿವೆ.

ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿ ಡಾ.ಆರ್.ವಿಶಾಲ್, ಪಿಪಿಪಿ ಕೋಶದ ನಿರ್ದೇಶಕ ಪುರುಷೋತ್ತಮ ಸಿಂಗ್ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News