Bengaluru | ವಿಧಾನ ಪರಿಷತ್ ಸ್ಥಾನ ಕೊಡಿಸುವುದಾಗಿ 1.5 ಕೋ.ರೂ. ವಂಚನೆ; ಪ್ರಕರಣ ದಾಖಲು
ಬೆಂಗಳೂರು : ‘ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ’ ಎಂದು ಹೇಳಿಕೊಂಡು, ‘ವಿಧಾನ ಪರಿಷತ್ ಸದಸ್ಯ ಸ್ಥಾನ’ ಕೊಡಿಸುವುದಾಗಿ ನಂಬಿಸಿ, ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ 1.5 ಕೋಟಿ ರೂ. ವಂಚಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೂವರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮುಖ್ಯ ಆರೋಪಿ ಯರ್ರಿಸ್ವಾಮಿ ಹಾಗೂ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿವಿಧ ಸ್ಥಳಗಳಲ್ಲಿ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿ ಯರ್ರಿಸ್ವಾಮಿ ತಾನು ಕಾಂಗ್ರೆಸ್ ಹಿರಿಯ ನಾಯಕರ ಮಾಧ್ಯಮ ಸಲಹೆಗಾರ ಎಂದು ಪರಿಚಯಿಸಿಕೊಂಡಿದ್ದ. ಆಡಳಿತಾರೂಢ ಪ್ರಭಾವಿ ನಾಯಕರೊಂದಿಗೆ ತೆಗೆಸಿಕೊಂಡಿದ್ದ ಫೋಟೊಗಳನ್ನು ತೋರಿಸಿ ಮಂಗಳೂರಿನ ಮಹಿಳೆಯನ್ನು ನಂಬಿಸಿದ್ದ. ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿದ್ದ ಈತ, ಅದಕ್ಕಾಗಿ 5 ಕೋಟಿ ರೂ.ಗೆ ವ್ಯವಹಾರ ನಡೆಸಿದ್ದ ಎನ್ನಲಾಗಿದೆ.
ಆರೋಪಿಯ ಮಾತುಗಳನ್ನು ಸತ್ಯವೆಂದು ನಂಬಿದ ಮಹಿಳೆ, 2024ರ ಆಗಸ್ಟ್‌ನಿಂದ 2025ರ ಜನವರಿಯ ಅವಧಿಯಲ್ಲಿ ಹಂತ-ಹಂತವಾಗಿ ಒಟ್ಟು 1.50 ಕೋಟಿ ರೂ. ನಗದನ್ನು ತಲುಪಿಸಿದ್ದಾರೆ. ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ ಬಳಿ ಯರ್ರಿಸ್ವಾಮಿಯ ಸೂಚನೆಯಂತೆ ಆತನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ವಂಚನೆಯಷ್ಟೇ ಅಲ್ಲದೆ, ಎಐಸಿಸಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ನಂಬಿಸಿ ಮಹಿಳೆಯನ್ನು ದಿಲ್ಲಿಗೆ ಕರೆದೊಯ್ದಿದ್ದ ಯರ್ರಿಸ್ವಾಮಿ, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.