ತಮಿಳುನಾಡಿಗೆ ಹರಿಸಿದರೆ ರಾಜ್ಯಕ್ಕೆ ನೀರು ಸಾಕಾಗುವುದಿಲ್ಲ : ವಾಟಾಳ್ ನಾಗರಾಜ್
ಬೆಂಗಳೂರು : ಒಂದು ಕಡೆ ಮಹದಾಯಿ, ಮೇಕೆದಾಟು ವಿಷಯದಲ್ಲೂ ನಮಗೆ ಅನ್ಯಾಯವಾಗಿದೆ. ಪ್ರತಿದಿನ 3,500 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿದರೆ ರಾಜ್ಯಕ್ಕೆ ನೀರು ಸಾಕಾಗುವುದಿಲ್ಲ. ಆದ್ದರಿಂದ ಜು.31ರ ಬೆಳಗ್ಗೆ 11ಗಂಟೆಗೆ ಖಾಸಗಿ ಹೊಟೆಲ್‍ನಲ್ಲಿ ನಡೆಯುವ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಕರ್ನಾಟಕ ಬಂದ್ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರ ಖಂಡಿಸಿ ನಡೆದ ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕರ್ನಾಟಕದ ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದ ವರೆಗೆ ಅಖಂಡ ಕರ್ನಾಟಕ ಬಂದ್ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯದ ಜನರು ಸಿದ್ಧರಾಬೇಕು ಎಂದು ತಿಳಿಸಿದರು.
ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎನ್ನುವ ಆದೇಶ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಮುಂಗಾರಿನ ಕೊರತೆಯಾಗಿರುವುದರಿಂದ ಇಲ್ಲಿಯ ವರೆಗೆ ರಾಜ್ಯದ ಯಾವುದೇ ಅಣೆಕಟ್ಟೆಗಳು ತುಂಬಿಲ್ಲ. ಈ ಸಂದರ್ಭದಲ್ಲಿ ಅವೈಜ್ಞಾನಿಕ ಆದೇಶ ನೀಡಿ, ಕನ್ನಡಿಗರ ಮೇಲೆ ಕೇಂದ್ರ ಸರಕಾರ ಮತ್ತು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕು. ಕಾವೇರಿ ನೀರಿಗಾಗಿ ಮೇಲ್ಮನವಿಯನ್ನು ಸಲ್ಲಿಸಬೇಕು. ಕರ್ನಾಟಕ ಬಂದ್ ಕುರಿತು ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.