ಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ : ಎಂ.ಬಿ.ಪಾಟೀಲ್
ಬೆಂಗಳೂರು : ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಪರಿಸರ ಸಂಬಂಧಿ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ನೀಡಿರುವ ಅಂತಿಮ ತೀರ್ಪಿನಲ್ಲಿ ನಿವಾರಿಸಿದೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮೂರು ತಿಂಗಳೊಳಗೆ ವಿಮಾನ ನಿಲ್ದಾಣದ ಲೋಕಾರ್ಪಣೆ ನೆರವೇರಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಯಮಾಲ್ಯ ಬಾಗ್ಚಿ ಮತ್ತು ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
ಅಲ್ಲದೆ, ಈ ವಿಚಾರದಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿಯನ್ನು ತಿಳಿದುಕೊಂಡು, ರಾಜ್ಯದ ಪರವಾಗಿ ವಿಚಾರ ಮಂಡಿಸಿದ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹೆಸರಾಂತ ನ್ಯಾಯವಾದಿ ಕಪಿಲ್ ಸಿಬಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ರಾಜ್ಯದ ಪರ ವಕೀಲ ನಿಶಾಂತ್ ಪಾಟೀಲ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಅವರು ತಿಳಿಸಿದರು.
ಖಾಸಗಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗಲೇ ಪರಿಸರ ಸಂಬಂಧಿ ಅನುಮೋದನೆಗಳನ್ನು ತೆಗೆದುಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಇದನ್ನು ಪಾಲಿಸದ ದೇಶದ ಎಲ್ಲ ಯೋಜನೆಗಳನ್ನೂ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ 2025ರ ಮೇ 16ರಂದು ಆದೇಶಿಸಿತ್ತು. ಇದರಿಂದಾಗಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೂ ಸಂಕಷ್ಟ ಎದುರಾಗಿತ್ತು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಆಗ ನಾನು ತುಷಾರ್ ಮೆಹತಾ, ಕಪೀಲ್ ಸಿಬಲ್ ಮತ್ತು ನಿಶಾಂತ್ ಪಾಟೀಲ್ ಅವರನ್ನು ಸಂಪರ್ಕಿಸಿ, ಈ ತೊಡಕನ್ನು ನಿವಾರಿಸುವಂತೆ ಕೇಳಿಕೊಂಡಿದ್ದೆ. ಇಂದಿನ ಅಂತಿಮ ತೀರ್ಪಿನಿಂದ ನಾನು ನಿರಾಳವಾಗಿದ್ದೇನೆ ಎಂದು ಅವರು ತಿಳಿಸಿದರು.
ಪರಿಸರ ಸಂಬಂಧಿ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಈಗ ಹೇಳಲಾಗಿದೆ. ಹೀಗಾಗಿ ವಿಜಯಪುರ ವಿಮಾಣ ನಿಲ್ದಾಣ ಸಂಬಂಧದ ಅಗತ್ಯ ಅನುಮತಿ ಸಿಗಲು ದಾರಿ ಸುಗಮವಾಗಿದೆ. ಇದಾದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಸುಪ್ರೀಂಕೋರ್ಟ್ ಈ ವರ್ಷದ ಎ.1ರಂದು ವಿಚಾರಣೆ ನಡೆಸಿದಾಗ, ಪರಿಸರ ಸಂಬಂಧಿ ಅನುಮತಿಗೆ ಕಾಯುತ್ತಿರುವ ಯೋಜನೆಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿ, ವಿಸ್ತೃತ ಅಧ್ಯಯನಕ್ಕೆ ಸೂಚಿಸಿ, ಅಂತಿಮ ತೀರ್ಪನ್ನು ಕಾದಿರಿಸಿತ್ತು. ಇವತ್ತು ನೀಡಿರುವ ತೀರ್ಪಿನಲ್ಲಿ ಶಾಶ್ವತ ವಿನಾಯಿತಿ ನೀಡಿದೆ. ಏತನ್ಮಧ್ಯೆ ನಾವು ವಿಜಯಪುರ ವಿಮಾನ ನಿಲ್ದಾಣ ಸಂಬಂಧ ಪರಿಸರ ಸಂಬಂಧಿ ಅನುಮತಿ ಕೋರಿ ಅರ್ಜಿ ಹಾಕಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಪರಿಸರ ಸಂಬಂಧಿ ಒಪ್ಪಿಗೆ ಸಿಕ್ಕಿದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರ ವಿಮಾನ ನಿಲ್ದಾಣದಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ. ಅದೊಂದು ಪ್ರಕ್ರಿಯೆ ಮುಗಿದರೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ದಾರಿ ಸುಗಮವಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ 614 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವಿನಿಯೋಗಿಸಲಾಗಿದೆ. ಇದು ಕಾರ್ಯಾರಂಭ ಮಾಡಿದರೆ ಕಿತ್ತೂರು ಕರ್ನಾಟಕ ಮತ್ತು ನೆರೆ ಹೊರೆ ಪ್ರದೇಶಗಳಿಗೂ ಅನುಕೂಲವಾಗಲಿದೆ ಎಂದು ಎಂ.ಬಿ.ಪಾಟೀಲ್ ಪ್ರತಿಪಾದಿಸಿದರು.