80 ಲಕ್ಷ ಮತದಾರರ ಹೆಸರು ಕೈಬಿಡುವ ಆತಂಕ; ಎಸ್‍ಐಆರ್ ಪ್ರಕ್ರಿಯೆ ಪಾರದರ್ಶಕವಾಗಿರಲಿ: ರಮೇಶ್ ಬಾಬು
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ರಾಜ್ಯದ ಸುಮಾರು 80 ಲಕ್ಷಕ್ಕೂ ಅಧಿಕ ಮತದಾರರನ್ನು ವಿವಿಧ ವರ್ಗಗಳ ಅಡಿಯಲ್ಲಿ ಗುರುತಿಸಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಯಾವುದೆ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?: ಒಟ್ಟು ಮತದಾರರ ಪೈಕಿ ಸುಮಾರು ಶೇ.15ರಷ್ಟು ಮತದಾರರನ್ನು ಎಎಸ್‍ಡಿಡಿಒ ವರ್ಗಗಳಲ್ಲಿ ಗುರುತಿಸಲಾಗಿದೆ.. ಈ ವರ್ಗೀಕರಣವನ್ನು ಸಮಗ್ರ ಪರಿಶೀಲನೆ ಇಲ್ಲದೆ ಅನುಷ್ಠಾನಗೊಳಿಸಿದರೆ ಲಕ್ಷಾಂತರ ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ರಮೇಶ್ ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.
ಅನರ್ಹ ಹೆಸರುಗಳನ್ನು ತೆಗೆದುಹಾಕುವುದರ ಜತೆಗೆ ಯಾವುದೇ ಅರ್ಹ ನಾಗರಿಕರ ಹೆಸರು ಆಡಳಿತಾತ್ಮಕ ಲೋಪ, ಅಪೂರ್ಣ ಕ್ಷೇತ್ರ ಪರಿಶೀಲನೆ ಅಥವಾ ತಾಂತ್ರಿಕ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮರುಪರಿಶೀಲನೆಗೆ ಆಗ್ರಹ: ಎಎಸ್‍ಡಿಡಿಒ ವರ್ಗಕ್ಕೆ ಸೇರಿಸಿರುವ ಪ್ರತಿಯೊಂದು ಪ್ರಕರಣದಲ್ಲೂ ಮತ್ತೊಮ್ಮೆ ಭೌತಿಕ ಪರಿಶೀಲನೆ ನಡೆಸಬೇಕು. ಒಂದೇ ಬಾರಿ ಮನೆಗೆ ಭೇಟಿ ನೀಡಿದ ಆಧಾರದ ಮೇಲೆ ಮತದಾರರ ಹೆಸರನ್ನು ಅಳಿಸಬಾರದು. ಹೆಸರು ಕೈಬಿಡುವ ಮುನ್ನ ಸಂಬಂಧಿತ ಮತದಾರರಿಗೆ ಸೂಕ್ತ ನೋಟಿಸ್ ನೀಡಿ ತಮ್ಮ ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರಾಮ, ವಾರ್ಡ್ ಹಾಗೂ ಮತಗಟ್ಟೆ ಮಟ್ಟದಲ್ಲಿ ನೆರವು ಕೇಂದ್ರಗಳನ್ನು ತೆರೆಯಬೇಕು. ಕ್ಷೇತ್ರವಾರು ಹಾಗೂ ವರ್ಗವಾರು ಪ್ರಸ್ತಾವಿತ ಹೆಸರು ಅಳಿಸುವಿಕೆಯ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಪರಿಶೀಲನಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಹಿರಿಯ ನಾಗರಿಕರು, ಅಂಗವಿಕಲರು, ಮಹಿಳೆಯರು, ವಲಸೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಂತಹ ದುರ್ಬಲ ವರ್ಗದ ಮತದಾರರು ಆಡಳಿತಾತ್ಮಕ ಅಥವಾ ಪ್ರಕ್ರಿಯಾತ್ಮಕ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಎಸ್‍ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ತಪ್ಪು ಹಾಗೂ ದಾರಿತಪ್ಪಿಸುವ ಮಾಹಿತಿಯನ್ನು ಹರಡುತ್ತಿರುವುದರಿಂದ ಮತದಾರರಲ್ಲಿ ಗೊಂದಲ ಉಂಟಾಗುತ್ತಿದೆ. ಇಂತಹವರ ವಿರುದ್ಧ ಜನಪ್ರತಿನಿಧಿತ್ವ ಕಾಯ್ದೆ-1950, ಮತದಾರರ ನೋಂದಣಿ ನಿಯಮಗಳು-1960 ಹಾಗೂ ಅನ್ವಯಿಸುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.