2026-27ನೆ ಸಾಲಿನ ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ
ಬೆಂಗಳೂರು : ಯಾವುದೇ ಆದಾಯ ಮಿತಿ ಇಲ್ಲದೆ, ಜಾತಿ, ವರ್ಗ ಅಥವಾ ಯಾವುದೇ ಇತರ ಮಾನದಂಡಗಳನ್ನು ಪರಿಗಣಿಸದೆ ಉನ್ನತ ಶಿಕ್ಷಣ ಪಡೆಯುವ ಪ್ರತಿಯೊಬ್ಬರಿಗೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಘೋಷಣೆ ಮಾಡಿದ್ದಾರೆ.
ಶನಿವಾರ ನಗರದ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‍ಜಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ 2026-27ನೆ ಸಾಲಿನ ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 12ನೆ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ 'ದೀಪಿಕಾ' ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಅರ್ಹ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 30 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುವುದು. ಇಂಜಿನಿಯರಿಂಗ್, ವೈದ್ಯಕೀಯ, ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ವಿವಿಧ ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‍ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬಹುದು. ಮೂರು ವರ್ಷದ ಪದವಿ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿನಿಗೆ ಒಟ್ಟು 90 ಸಾವಿರ ರೂ. ನಾಲ್ಕು ವರ್ಷದ ಕೋರ್ಸ್‍ಗೆ 1.20 ಲಕ್ಷ ರೂ. ಹಾಗೂ ಐದು ವರ್ಷದ ವೈದ್ಯಕೀಯ ಕೋರ್ಸ್‍ಗೆ ಸುಮಾರು 1.50 ಲಕ್ಷ ರೂ. ನೆರವು ದೊರೆಯಲಿದೆ ಎಂದು ಅವರು ವಿವರಿಸಿದರು.
ಪ್ರಮುಖವಾಗಿ ವಿದ್ಯಾರ್ಥಿವೇತನಕ್ಕೆ ಯಾವುದೇ ಆದಾಯ ಮಿತಿ ಇಲ್ಲ. ಜಾತಿ, ವರ್ಗ ಅಥವಾ ಯಾವುದೇ ಇತರ ಮಾನದಂಡಗಳನ್ನು ಪರಿಗಣಿಸಲಾಗುವುದಿಲ್ಲ. ಸರಕಾರಿ ಶಾಲೆಯಲ್ಲಿ 10ನೆ ತರಗತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 12ನೆ ತರಗತಿ ಶಿಕ್ಷಣ ಪೂರ್ಣಗೊಳಿಸಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿನಿಯರು ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ವರ್ಷ ವಿವಿಧ ಪದವಿ ಕಾಲೇಜುಗಳಲ್ಲಿ ಈಗಾಗಲೇ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಇನ್ನೂ ಪ್ರವೇಶ ಪಡೆಯದ ಅರ್ಹ ವಿದ್ಯಾರ್ಥಿನಿಯರು ಪದವಿ ಕೋರ್ಸ್‍ಗಳಿಗೆ ಪ್ರವೇಶ ಪಡೆದು ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬೇಕು. ಅರ್ಜಿ ಸಲ್ಲಿಸಲು ಮೊದಲ ಹಂತದಲ್ಲಿ ಆ.31ರವರೆಗೆ ಅವಕಾಶವಿದೆ ಎಂದ ಅವರು, ಅರ್ಹ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
.........................