ಬೆಳಗಾವಿ : ಕೋಟ್ಯಂತರ ರೂಪಾಯಿ ಮೌಲ್ಯದ ‘ಶಿವಂ ಸ್ಕ್ಯಾಮ್’ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಈ.ಡಿ.) ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಿಂಗ್‌ಪಿನ್ ಎನ್ನಲಾಗಿರುವ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಸಹಿತ ಒಟ್ಟು ಆರು ಮಂದಿ ವಿರುದ್ಧ ಈ.ಡಿ.ಯ ಮಂಗಳೂರು ಶಾಖೆ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಿ, 2,459 ಕೋಟಿಗೂ ಅಧಿಕ ಮೊತ್ತ ವಂಚಿಸಲಾಗಿದೆ ಎಂಬ ಆರೋಪ ಈ ಪ್ರಕರಣದಲ್ಲಿದೆ. ಇದೀಗ ವಂಚನೆಯಿಂದ ಸಂಗ್ರಹಿಸಿದ ಹಣವನ್ನು ಆರೋಪಿಗಳು ಯಾವೆಲ್ಲ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಕುರಿತು ಈ.ಡಿ. ತನಿಖೆಯಲ್ಲಿ ಮಹತ್ವದ ಅಂಶಗಳು ಬಹಿರಂಗವಾಗಿವೆ.

ಈ.ಡಿ. ಸಲ್ಲಿಸಿರುವ ಪ್ರಾಸಿಕ್ಯೂಷನ್ ದೂರಿನ ಪ್ರಕಾರ, ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆಯ ವಿವಿಧ ವಹಿವಾಟುಗಳಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲದೆ, ಹಲವು ಸಹಕಾರ ಸಂಘಗಳಲ್ಲಿ ಸ್ಥಿರ ಠೇವಣಿ (ಎಫ್‌ಡಿ) ರೂಪದಲ್ಲಿ ಹಣ ಇರಿಸಿರುವುದು ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಆರೋಪಗಳೂ ಕೇಳಿಬಂದಿವೆ.

ಆರೋಪಿಗಳು ತಮ್ಮ ಕುಟುಂಬ ಸದಸ್ಯರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿರುವುದಾಗಿಯೂ ಈ.ಡಿ. ಆರೋಪಿಸಿದೆ. ಅಕ್ರಮವಾಗಿ ಸಂಗ್ರಹಿಸಿದ ಹಣದ ಮೂಲವನ್ನು ಮರೆಮಾಚಿ, ಅದನ್ನು ವಿವಿಧ ಮಾರ್ಗಗಳ ಮೂಲಕ ವರ್ಗಾಯಿಸುವ ಮೂಲಕ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ನಡೆಸಿರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

ಸಾರ್ವಜನಿಕರ ಹಣದ ದುರುಪಯೋಗ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor