ತುಳುನಾಡಿಗೆ ತನ್ನದೇ ಆದ ವಿಶೇಷ ಸಂಸ್ಕೃತಿ ಇದೆ : ಅಬ್ದುಲ್ ಅಹದ್
ಬೆಂಗಳೂರು : ತುಳುನಾಡಿಗೆ ತನ್ನದೇ ಆದ ವಿಶೇಷ ಸಂಸ್ಕೃತಿ ಇದೆ. ಅದರ ಜೊತೆಗೆ ನಾವು ಕನ್ನಡ ಭಾಷೆ, ಕನ್ನಡ ಸಂಸ್ಕೃತಿಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದೇವೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಭದ್ರತಾ-ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ‘ದಕ್ಷಿಣ ಕನ್ನಡಿಗರ ಸಂಘ’ದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕರಾವಳಿ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕವಾಗಿ ನೋಡಿದರೆ ಮುಸ್ಲಿಂ, ಕ್ರಿಶ್ಚಿಯನ್ ಸಮಾಜದವರು ತಮ್ಮ ಧಾರ್ಮಿಕ ವಿಷಯಗಳನ್ನು ಬೋಧನೆ ಮಾಡಲು ಕನ್ನಡವನ್ನು ಬಳಸುತ್ತಾರೆ. ಇದು ದಕ್ಷಿಣ ಕನ್ನಡದ ಒಂದು ವೈಶಿಷ್ಟ್ಯ ಎಂದು ಬಣ್ಣಿಸಿದರು.
ದಕ್ಷಿಣ ಕನ್ನಡ (ಕರಾವಳಿ)ಗೆ 2ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಕರಾವಳಿ ಪ್ರದೇಶದಲ್ಲಿ ಸಾಕಷ್ಟು ಬೇರೆ-ಬೇರೆ ಸಂಸ್ಕೃತಿಗಳ ಮಿಲನ ಆಗಿದೆ. ಬೇರೆ ಬೇರೆ ದೇಶಗಳೊಂದಿಗೆ ವ್ಯಾಪಾರ ವಹಿವಾಟುಗಳನ್ನು ಇಟ್ಟುಕೊಂಡಿದ್ದಾರೆ. ಬೇರೆ-ಬೇರೆ ಪ್ರದೇಶದ ಜನರು ಕೂಡ ದಕ್ಷಿಣ ಕನ್ನಡಕ್ಕೆ ಬಂದಿದ್ದಾರೆ ಎಂದು ಅಬ್ದುಲ್ ಅಹದ್ ಹೇಳಿದರು.
ನಿವೃತ್ತ ಡಿಸಿಪಿ ಜಿ.ಎ.ಬಾವಾ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಮತ್ತು ಇನ್ನಿತರ ಕ್ಷತ್ರದಲ್ಲಿ ಮುಂದಿದೆ. ಅನೇಕರು ದಕ್ಷಿಣ ಕನ್ನಡ ಕೋಮು ಸೂಕ್ಷ್ಮತೆ ಹೊಂದಿದೆ ಎಂದು ದೂರುತ್ತಾರೆ. ಆದರೆ ನಿಜಕ್ಕೂ ಅದು ಸುಳ್ಳು. ರಾಜಕೀಯದಿಂದ ಕೋಮು ಗಲಭೆಗಳು ಆಗುತ್ತವೆ ಎನ್ನುವುದು ನನ್ನ ಅಭಿಪ್ರಾಯ. ಜನರಿಗೆ ಹಿಂದೂ-ಮುಸ್ಲಿಂ ಎಂಬ ಬೇಧ ಭಾವ ಇಲ್ಲ. ನಾವು ಯಾವುದೇ ಸುಳ್ಳು ಯೋಜಿತ ಪ್ರಚಾರಕ್ಕೆ ಒಳಗಾಗದೇ, ಎಲ್ಲರೂ ಸೌಹಾರ್ದದಿಂದ ಬದುಕಬೇಕು ಎಂದು ಹೇಳಿದರು.
ಇದೇ ವೇಳೆ ನಿವೃತ್ತ ಡಿಸಿಪಿ ಜಿ.ಎ.ಬಾವಾ, ಉದ್ಯಮಿ ರಾಜೇಶ್ ಶೆಟ್ಟಿ, ಗ್ರೇಶಿಯನ್ ರೋಡ್ರಿಗಸ್ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ, ಪದಾಧಿಕಾರಿ ಥಾಮಸ್ ಡಿ.ಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.