ಡಾ.ಮನಮೋಹನ್ ಸಿಂಗ್ ಬೆಂ.ನಗರ ವಿವಿಯಿಂದ ಎರಡೇ ದಿನದಲ್ಲಿ ಬಿ.ಎಡ್ ಫಲಿತಾಂಶ ಪ್ರಕಟ
ಬೆಂಗಳೂರು : ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಬಿ.ಎಡ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯಗೊಂಡ ಕೇವಲ ಎರಡು ದಿನಗಳಲ್ಲೇ ಫಲಿತಾಂಶವನ್ನು ಪ್ರಕಟಿಸಿ ದಾಖಲೆ ನಿರ್ಮಿಸಿದ್ದು, ನ.14ರಂದು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿದೆ.
ನ.12ರಂದು ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ಒಟ್ಟು 1,699 ವಿದ್ಯಾರ್ಥಿಗಳಿಗೆ ಸೇರಿದ 6,612 ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ವಿಶ್ವ ವಿದ್ಯಾಲಯವು ಅಲ್ಪಾವಧಿಯಲ್ಲೇ ಪೂರ್ಣಗೊಳಿಸಿದೆ. ಕರ್ನಾಟಕದಲ್ಲಿ ಖಾಲಿ ಇರುವ 15ಸಾವಿರ ಶಿಕ್ಷಕರು ಮತ್ತು 683 ಹಾಸ್ಟೆಲ್ ವಾರ್ಡನ್ಗಳ ನೇಮಕಾತಿಗೆ, ವಿವಿಯ ಪದವೀಧರರು ಅರ್ಜಿ ಸಲ್ಲಿಸಲು ಅನುವಾಗುವಂತೆ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ರಮೇಶ್ ಬಿ.ತಿಳಿಸಿದ್ದಾರೆ.
ಅತಿ ಶೀಘ್ರವಾಗಿ ಫಲಿತಾಂಶವನ್ನು ಪ್ರಕಟಿಸಲು ಸಹಕರಿಸಿದ ಎಲ್ಲ ಬಿಎಡ್ ಕಾಲೇಜುಗಳ ಅಧ್ಯಾಪಕರಿಗೆ, ಮೌಲ್ಯಮಾಪನ ಘಟಕದ ಸಂಯೋಜಕರಿಗೆ ಹಾಗೂ ವಿವಿ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ ಕುಲಸಚಿವ(ಮೌಲ್ಯಮಾಪನ )ಪ್ರೊ.ರಮೇಶ್ ಬಿ. ಕುಡೇನಟ್ಟಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನ.16ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುವ ಕಾರಣ ಬಿಎಡ್ ವಿದ್ಯಾರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಅಲ್ಪ ಸಮಯದಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.