ಬೆಂಗಳೂರಿನಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದರ ಭಾರತ ಪ್ರಾಂತ್ಯದ ಸಮ್ಮೇಳನ ಉದ್ಘಾಟಿಸಲಿರುವ ಲೋಕಸಭೆ ಸ್ಪೀಕರ್
ಸ್ಪೀಕರ್ ಓಂ ಬಿರ್ಲಾ | Photo Credit : PTI
ಬೆಂಗಳೂರು : ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನ.17ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಕಾಮನ್ವೆಲ್ತ್ ಮಹಿಳಾ ಸಂಸದರ(ಸಿಡಬ್ಲ್ಯೂಪಿ) ಭಾರತ ಪ್ರಾಂತ್ಯದ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನಸಭೆಯ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಮತ್ತು ಸಿಡಬ್ಲ್ಯೂಪಿ ಭಾರತ ಪ್ರಾಂತ್ಯದ ಅಧ್ಯಕ್ಷೆ ಡಾ.ಡಿ.ಪುರಂದೇಶ್ವರಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ವಿಧಾನಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಸ್ವಾಗತ ಭಾಷಣ ಮಾಡಲಿದ್ದು, ಉಪಸಭಾಪತಿ ಡಾ. ಉಮಾಶ್ರೀ ವಂದನಾರ್ಪಣೆ ಸಲ್ಲಿಸಲಿದ್ದಾರೆ. ಸಂಸತ್ತು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಮಂಡಲಗಳ ಮಹಿಳಾ ಶಾಸಕರು ಹಾಗೂ ಇತರ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಈ ಸಮ್ಮೇಳನದ ಧ್ಯೇಯವಾಕ್ಯವು ‘ಸದೃಢ ಅಡಿಪಾಯಗಳು, ಬಲವಾದ ಧ್ವನಿಗಳು: ಹೊಸ ಮಹಿಳಾ ಶಾಸಕರಿಗಾಗಿ ಒಳಗೊಳ್ಳುವ ಸೈಬರ್ಸ್ಪೇಸ್ ಮತ್ತು ಮಾರ್ಗದರ್ಶನದ ಹಾದಿಗಳು' ಎಂಬುದಾಗಿದೆ. ಸಮ್ಮೇಳನದಲ್ಲಿ ಎರಡು ಪೂರ್ಣ ಪ್ರಮಾಣದ ಗೋಷ್ಠಿಗಳು ನಡೆಯಲಿವೆ.
ನ.17ರಂದು ‘ಮಹಿಳೆಯರನ್ನು ಡಿಜಿಟಲ್ ಆಗಿ ಸಬಲೀಕರಣಗೊಳಿಸುವುದು: ಸುರಕ್ಷಿತ ಸೈಬರ್ಸ್ಪೇಸ್, ಸ್ಮಾರ್ಟ್ ಆಯ್ಕೆಗಳು' ಕುರಿತು ಮೊದಲ ಗೋಷ್ಠಿ ನಡೆಯಲಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಮಹಿಳೆಯರು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವತ್ತ ಗಮನಹರಿಸಲಿದೆ. ನ.18ರಂದು ‘ಮಹಿಳಾ ಶಾಸಕರಿಗೆ ಸಾಮಥ್ರ್ಯ ವೃದ್ಧಿ ಮತ್ತು ಮಾರ್ಗದರ್ಶನ' ಕುರಿತು ಎರಡನೆ ಗೋಷ್ಠಿ ನಡೆಯಲಿದೆ. ಶಾಸಕಾಂಗ ಸಾಮಥ್ರ್ಯಗಳನ್ನು ಬಲಪಡಿಸುವ ಮತ್ತು ವಿಶೇಷವಾಗಿ ಶಾಸಕಾಂಗ ಸಂಸ್ಥೆಗಳಿಗೆ ಹೊಸದಾಗಿ ಪ್ರವೇಶಿಸುವ ಮಹಿಳಾ ಶಾಸಕರನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಿಸಲಿದೆ.
ವ್ಯಾಪಕ ಚರ್ಚೆಗಳಿಗೆ ಪೂರಕವಾದ ವಿಶೇಷ ಉಪಕ್ರಮವಾಗಿ, ಯುಎನ್ ವುಮೆನ್ ಇಂಡಿಯಾ ನ.17ರಂದು ಋತುಬಂಧದ ಕುರಿತು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ. ಈ ಸಮಾಲೋಚನೆಗಳು ಅನುಭವಗಳನ್ನು ಹಂಚಿಕೊಳ್ಳಲು, ಉತ್ತಮ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಡಿಜಿಟಲ್ ಸಬಲೀಕರಣ, ಸಾಮಥ್ರ್ಯ ವೃದ್ಧಿ ಹಾಗೂ ಮಾರ್ಗದರ್ಶನದ ಮೂಲಕ ಮಹಿಳಾ ಶಾಸಕರ ಭಾಗವಹಿಸುವಿಕೆ ಮತ್ತು ನಾಯಕತ್ವವನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ಪ್ರಮುಖ ವೇದಿಕೆಯನ್ನು ಒದಗಿಸಲಿವೆ.
ಈ ಕಾರ್ಯಕ್ರಮವು ಜಾಗೃತಿ ಮೂಡಿಸಲು, ಮಾಹಿತಿಯುಕ್ತ ಸಂವಾದವನ್ನು ಪ್ರೋ ತ್ಸಾಹಿಸಲು ಮತ್ತು ಜೀವನದ ವಿವಿಧ ಹಂತಗಳಲ್ಲಿ ಮಹಿಳೆಯರ ಆರೋಗ್ಯ, ಯೋಗಕ್ಷೇಮ ಹಾಗೂ ಘನತೆಯತ್ತ ಹೆಚ್ಚಿನ ಗಮನ ಸೆಳೆಯಲು ಪ್ರಮುಖ ವೇದಿಕೆಯನ್ನು ಒದಗಿಸಲಿದೆ.
ನ.18ರಂದು ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರ ಸಮಾರೋಪ ಭಾಷಣದೊಂದಿಗೆ ಸಮ್ಮೇಳನವು ಮುಕ್ತಾಯಗೊಳ್ಳಲಿದೆ. ಮುಖ್ಯಮಂತ್ರಿ, ರಾಜ್ಯಸಭೆಯ ಉಪಸಭಾಪತಿ ಮತ್ತು ವಿಧಾನಪರಿಷತ್ತಿನ ಸಭಾಪತಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಿಡಬ್ಲ್ಯೂಪಿ ಭಾರತ ಪ್ರಾಂತ್ಯದ ಅಧ್ಯಕ್ಷರು ಸಮ್ಮೇಳನದ ಫಲಿತಾಂಶದ ಕುರಿತು ಹೇಳಿಕೆಯನ್ನು ಮಂಡಿಸಲಿದ್ದಾರೆ. ವಿಧಾನಸಭೆಯ ಸಭಾಧ್ಯಕ್ಷರು ಸ್ವಾಗತ ಭಾಷಣ ಮಾಡಲಿದ್ದು, ಉಪಸಭಾಧ್ಯಕ್ಷರು ವಂದನಾರ್ಪಣೆ ಸಲ್ಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.