ಬೆಂಗಳೂರು : ಕಾರು ಮಾರಾಟ ಮಾಡುವ ಮಧ್ಯವರ್ತಿಯೋರ್ವ ಕುಡಿದು ಕಾರು ಚಾಲನೆ ಮಾಡಿದ್ದಲ್ಲದೆ, ಸಂಚಾರಿ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್(ಪಿಎಸ್ಸೈ) ಅವರ ಸಮವಸ್ತ್ರವನ್ನೇ ಹರಿದು, ಆತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಧ್ಯವರ್ತಿಯನ್ನು ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಸಂಪಂಗಿರಾಮನಗರ ನಿವಾಸಿ ಸಚಿನ್ (35) ಎಂದು ಗುರುತಿಸಲಾಗಿದೆ. ಈತ ಕಾರುಗಳ ವ್ಯಾಪಾರ ಮಾಡುವ ದಳ್ಳಾಳಿಯಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಚಿನ್ ಮಹದೇಶ್ವರ ನಗರ ಮುಖ್ಯರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಸಮೀಪ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ, ಮನೆ ಕಾಂಪೌಂಡ್‍ಗೆ ಡಿಕ್ಕಿ ಹೊಡೆದಿದ್ದಲ್ಲದೆ, ಪ್ರಶ್ನಿಸಲು ಬಂದ ಟ್ರಾಫಿಕ್ ಪಿಎಸ್‍ಐ ಮೇಲೆಯೇ ಹಲ್ಲೆ ನಡೆಸಿ ಸಮವಸ್ತ್ರ ಹರಿದು ದರ್ಪ ತೋರಿದ್ದಾನೆ. ಈ ಸಂಬಂಧ ಪಿಎಸ್‍ಐ ಕೃಷ್ಣ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಚಿನ್ ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ದೊಡ್ಡ ಶಬ್ದ ಕೇಳಿ ಎಚ್ಚರಗೊಂಡ ಸ್ಥಳೀಯರು ಮನೆಗಳಿಂದ ಹೊರಬಂದಿದ್ದಾರೆ. ಈ ವೇಳೆ ಸಚಿನ್ ಅವರೊಂದಿಗೆ ಜಗಳಕ್ಕಿಳಿದಿದ್ದಾನೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಎದುರೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಆತನ ವರ್ತನೆಯನ್ನು ಪ್ರಶ್ನಿಸಿದ ಸ್ಥಳೀಯರ ಪೈಕಿ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಗಸ್ತಿನಲ್ಲಿದ್ದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯ ಪಿಎಸ್‍ಐ ಕೃಷ್ಣ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಸಚಿನ್‍ನನ್ನು ವಿಚಾರಿಸಿ ಮದ್ಯ ಸೇವನೆ ಮಾಡಿರುವ ಬಗ್ಗೆ ಪರೀಕ್ಷಿಸಲು ಬ್ರೀತ್ ಅನಲೈಸರ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಆದರೆ, ಪರೀಕ್ಷೆಗೆ ನಿರಾಕರಿಸಿದ ಸಚಿನ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಪೊಲೀಸ್ ಠಾಣೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಾನೆ.

ಈ ವೇಳೆ ಆತನನ್ನು ಹೊಯ್ಸಳ ಗಸ್ತು ವಾಹನಕ್ಕೆ ಕೂರಿಸಲು ಪೊಲೀಸರು ಮುಂದಾದಾಗ ಸಚಿನ್ ಪಿಎಸ್‍ಐ ಕೃಷ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಹರಿದು ಹಾಕಿದ್ದಾನೆ. ಮುಖಕ್ಕೂ ಗುದ್ದಿದ್ದಾನೆ. ಅಲ್ಲದೆ, ಸಮವಸ್ತ್ರದಲ್ಲಿದ್ದ ಸ್ಟಾರ್‌ ಗಳನ್ನು ಕಿತ್ತು ಜೇಬಿನಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor