‘ನೋಟು ಅಮಾನ್ಯೀಕರಣ’ ನಕಲಿ ನೋಟುಗಳ ಹಾವಳಿ ಏಕೇ ನಿಂತಿಲ್ಲ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಒಂದು ‘ಮಾಸ್ಟರ್ಸ್ಟ್ರೋಕ್' ಎಂದು ದೇಶಕ್ಕೆ ಬಿಂಬಿಸಲಾದ ಪ್ರಧಾನಿ ಮೋದಿಜಿಯವರ ನೋಟು ಅಮಾನ್ಯೀಕರಣಕ್ಕೆ ಹತ್ತು ವರ್ಷಗಳಾಗಿದ್ದು, ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ರಾಜಕೀಯ ದುರಂತಗಳಲ್ಲಿ ಒಂದಾಗಿ ಉಳಿಯಲಿದೆ. ನೋಟು ಅಮಾನ್ಯೀಕರಣ ಮಾಡಿದರೂ, ದೇಶದಲ್ಲಿ ನಕಲಿ ನೋಟುಗಳ ಹಾವಳಿ ಏಕೆ ನಿಂತಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ರವಿವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೋದಿ ತಮ್ಮ ಸಾಧನೆಗಳನ್ನು ಸಂಭ್ರಮಾಚರಣೆ ಮಾಡಲು ಯಾವ ಅವಕಾಶವನ್ನೂ ಬಿಡದ ಪ್ರಧಾನಿಯಾಗಿದ್ದಾರೆ. ಆದರೆ ಈ ಅಮಾನ್ಯೀಕರಣ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೌನವಾಗಿರುವುದು ಎದ್ದು ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್ಬಿಐ ನೀಡಿರುವ ಅಂಕಿ-ಅಂಶಗಳೇ ಮೋದಿಜಿಯವರ ಈ ಬೃಹತ್ ವೈಫಲ್ಯವನ್ನು ಬಯಲು ಮಾಡುತ್ತವೆ. ನೋಟು ಅಮಾನ್ಯೀಕರಣದ ಮೂಲಕ ನಕಲಿ ಕರೆನ್ಸಿಯನ್ನು ತಡೆಯುವುದಾಗಿ ಮೋದಿಜಿ ಭರವಸೆ ನೀಡಿದ್ದರು. ಆದರೆ, 2025-26ನೇ ಹಣಕಾಸು ವರ್ಷದಲ್ಲಿ ಪತ್ತೆಯಾದ 500 ರೂ.ಗಳ ನಕಲಿ ನೋಟುಗಳ ಸಂಖ್ಯೆ ಶೇ.20.5ರಷ್ಟು ಹೆಚ್ಚಾಗಿ, 1.42 ಲಕ್ಷ ರೂ.ಗೆ ತಲುಪಿದೆ ಎಂದು ಹೇಳಿದ್ದಾರೆ.
ನೋಟು ಅಮಾನ್ಯೀಕರಣಕ್ಕೂ ಮೊದಲು ಚಲಾವಣೆಯಲ್ಲಿದ್ದ ನಗದು ಸುಮಾರು 18 ಲಕ್ಷ ರೂ. ಕೋಟಿಯಷ್ಟಿತ್ತು. ಆದರೆ ಈಗ ಅದು 43 ಲಕ್ಷ ಕೋಟಿ ರೂ.ಗೂ ಮೀರಿದೆ. ಅಲ್ಲದೆ, ಅಮಾನ್ಯೀಕರಣಗೊಳಿಸಲಾದ ಒಟ್ಟು ಕರೆನ್ಸಿಯಲ್ಲಿ ಶೇ.99.3ರಷ್ಟು, ಅಂದರೆ 15.31 ಲಕ್ಷ ಕೋಟಿ ಮೌಲ್ಯದ ರೂ. ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದರಿಂದ ಲಕ್ಷಾಂತರ ಜನರು ಸಂಕಷ್ಟಕ್ಕೀಡಾದರು. ಜೀವನೋಪಾಯಗಳು ಅಸ್ತವ್ಯಸ್ತಗೊಂಡವು. ಆದರೆ ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಭರವಸೆ ಎಂದಿಗೂ ಈಡೇರಲೇ ಇಲ್ಲ ಎಂದು ಅವರು ಹೇಳಿದ್ದಾರೆ.