Bengaluru | ಹೈದಾರಾಬಾದ್ ನಿಂದ ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಆರೋಪದಲ್ಲಿ ಹೈದಾರಾಬಾದ್ ಮೂಲದ ಯುವಕನೊಬ್ಬನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.
ನೇನಾವತ್ ವಿನೋದ್ ಕುಮಾರ್ ಬಂಧಿತ ಆರೋಪಿ. ಈತನ ವಿಶೇಷತೆ ಏನೆಂದರೆ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳ, ವೃದ್ಧ ದಂಪತಿಯನ್ನ ಬೆದರಿಸಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ.
ಈ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ವಿನೋದ್ ಕುಮಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ವಿಚಾರಣೆ ಮಾಡಿದಾಗ ಆತ ಕಳ್ಳತನ ಮಾಡಲು ಹೈದರಾಬಾದ್ ನಿಂದ ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದು ಎಂಬುದು ತಿಳಿದುಬಂದಿದೆ. ಸದ್ಯ ಆರೋಪಿಯಿಂದ 40 ಲಕ್ಷ ರೂ. ಮೌಲ್ಯದ 271 ಗ್ರಾಂ ಚಿನ್ಮಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನೋದ್ ಮೇಲೆ ಹೈದರಾಬಾದ್ ನಲ್ಲೂ ಸಾಕಷ್ಟು ಪ್ರಕರಣಗಳಿದ್ದು, ಅಲ್ಲಿಯ ಪೊಲೀಸರ ಹುಡುಕಾಟ ಜಾಸ್ತಿಯಾದ ಕಾರಣ ಬೆಂಗಳೂರನ್ನು ಕಳ್ಳತನಕ್ಕೆ ಆಯ್ಕೆ ಮಾಟಿಕೊಂಡಿದ್ದ ಎಂಬುದು ಗೊತ್ತಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.