×
Ad

ಪೊಲೀಸ್ ದಂಪತಿಗಳ ಅಂತರ್ ಜಿಲ್ಲಾ ವರ್ಗಾವಣೆ ನಿಯಮ ಸಡಿಲಿಕೆಗೆ ಕ್ರಮ: ಗೃಹಸಚಿವ ಡಾ.ಜಿ.ಪರಮೇಶ್ವರ

Update: 2024-02-01 13:31 IST

ಬೆಂಗಳೂರು, ಫೆ.1: ಪೊಲೀಸ್ ದಂಪತಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ಕೆಲ ನಿಯಮಗಳನ್ನು ಮಾಡಬೇಕು. ಈಗಿರುವ ನಿಯಮಗಳು ಕಠಿಣವಾಗಿದ್ದು, ಅವುಗಳನ್ನು ಸಡಿಲಗೊಳಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಪೊಲೀಸ್ ಪತಿ-ಪತ್ನಿಯರು, ಉತ್ತರ ಕರ್ನಾಟಕ ಭಾಗದವರು ಎಂಟತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಸ್ವಾಭಾವಿಕವಾಗಿ ಅವರಿಗೆ ತಮ್ಮ ಊರುಗಳ ಕಡೆ ಕೆಲಸ ಮಾಡಬೇಕೆಂಬ ಆಸೆ ಇರುತ್ತದೆ. ಪ್ರಾವಿಸನ್ ಹೇಗೆ ಮಾಡಬೇಕು ಎಂಬುದನ್ನು ಕಾನೂನಿನಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡುತ್ತೇವೆ ಎಂದರು.

ನಮ್ಮ ಪಕ್ಷವು ಐದು ಗ್ಯಾರಂಟಿ ಯೋಜನೆಗಳ ಭರವಸೆ ಕೊಟ್ಟಿತ್ತು. ಎಲ್ಲವನ್ನು ಅನುಷ್ಠಾನ ಮಾಡಿದ್ದೇವೆ. ಕಳೆದ ಬಾರಿ 8 ತಿಂಗಳಿಗೆ 36 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಈ ಬಾರಿಯ ಬಜೆಟ್ನಲ್ಲಿ 12 ತಿಂಗಳಿಗೆ ನಮ್ಮ ಅಂದಾಜಿನ ಪ್ರಕಾರ 58 ಸಾವಿರ ಕೋಟಿ ರೂ. ಖರ್ಚಾಗಲಿದೆ ಎಂದರು.

ಸೋನಿಯಾ ಗಾಂಧಿ ರಾಜ್ಯದಿಂದ ಪ್ರತಿನಿಧಿಸುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ತೀರ್ಮಾನವನ್ನು ಸಾಮಾನ್ಯವಾಗಿ ರಾಜ್ಯದಿಂದ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಮಾಡುವುದಿಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಈ ಹಿಂದಿನಿಂದಲೂ ಇದೇರೀತಿಯಾಗಿ ನಡೆದುಕೊಂಡು ಬರಲಾಗಿದೆ. ರಾಷ್ಟ್ರೀಯ ವರಿಷ್ಟರು ಯಾರನ್ನು ಎಲ್ಲಿಂದ ಪ್ರತಿನಿಧಿಸಲು ಸೂಚಿಸುತ್ತಾರೋ ಅವರಿಗೆ ಬಿಟ್ಟಿದ್ದು. ಸೋನಿಯಾ ಗಾಂಧಿ ಕರ್ನಾಟಕದಿಂದ ಪ್ರತಿನಿಧಿಸಿದರೆ ಸಂತೋಷದ ವಿಚಾರ ಎಂದು ಹೇಳಿದರು.

ಜಾತಿಗಣತಿ ತೆಗೆದುಕೊಳ್ಳಲಿ ನೋಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಧಮ್ಕಿ ಹಾಕಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾಕತ್, ಧಮ್ಕಿಗಳನ್ನು ಪ್ರತಿನಿತ್ಯ ರಾಜಕಾರಣದಲ್ಲಿ ಕೇಳುತ್ತಿರುತ್ತೇವೆ. 168 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ವರದಿ ಸಿದ್ಧಪಡಿಸಲಾಗುತ್ತಿದೆ. ಧಮ್ಕಿ ಹಾಕಿದರೆ ವರದಿ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಡ್ತಾರ. ವರದಿ ಸಿದ್ಧಪಡಿಸುವ ಕಾರ್ಯ ಕೊನೆ ಹಂತದಲ್ಲಿರುವುದರಿಂದ ಆಯೋಗ ಕಾಲಾವಕಾಶ ಕೇಳಿರಬಹುದು. ಹೀಗಾಗಿ ಮುಖ್ಯಮಂತ್ರಿಯವರು ಆಯೋಗಕ್ಕೆ ಸಮಯ ನೀಡಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News