‘ಎಸ್ಐಆರ್’ ವಿರುದ್ಧದ ಹೋರಾಟದಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು : ಶಿವಸುಂದರ್
ಶಿವಸುಂದರ್
ಬೆಂಗಳೂರು : ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಅದನ್ನು ಕಳೆದುಕೊಂಡರೆ ರೈತರು ಸೇರಿದಂತೆ ಜನಸಾಮಾನ್ಯರ ಬೇಡಿಕೆಗಳಿಗೆ ಸರಕಾರದ ಗಮನ ಸೆಳೆಯುವುದು ಕಷ್ಟವಾಗಲಿದೆ. ಹೀಗಾಗಿ, ಎಸ್ಐಆರ್ ವಿರುದ್ಧದ ಹೋರಾಟದಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಚಿಂತಕ ಶಿವಸುಂದರ್ ಕರೆ ನೀಡಿದ್ದಾರೆ.
ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಎಸ್ಐಆರ್ ಸಾಧಕ- ಬಾಧಕ ವಿಚಾರದ ಕುರಿತು ಆಯೋಜಿಸಿದ್ದ ಆನ್ಲೈನ್ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅ.23ರಿಂದ ದೇಶಾದ್ಯಂತ ಎಸ್ಐಆರ್ ವಿರೋಧಿ ಹೋರಾಟ ಮತ್ತೊಂದು ಮಜಲನ್ನು ಪ್ರವೇಶಿಸಲಿದೆ. ಎಸ್ಐಆರ್ ವಿರೋಧಿ ಹೋರಾಟದಲ್ಲಿ ದಲಿತ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಕೈಜೋಡಿಸಿರುವುದು ಪ್ರಜಾಪ್ರಭುತ್ವದ ಬಗ್ಗೆ ಹೊಸ ಭರವಸೆ ಮೂಡಿಸಿದೆ ಎಂದು ಬಣ್ಣಿಸಿದರು.
ಈ ದೇಶದ ರೈತ ಶಕ್ತಿ ಈ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಮಣಿಸಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿತ್ತು. ಆ ಹೋರಾಟ ದೇಶದ ಜನರಿಗೆ ಮತ್ತೊಂದು ಭರವಸೆ ನೀಡಿತ್ತು. ಇದೀಗ ದೇಶದ ದಲಿತರು, ದಮನಿತರು ಸೇರಿದಂತೆ ವಿವಿಧ ಶೋಷಿತ ಸಮುದಾಯಗಳನ್ನು ಹಕ್ಕುಗಳಿಂದ ವಂಚಿಸುವ ಪ್ರಯತ್ನಗಳ ವಿರುದ್ಧವೂ ಹೋರಾಟ ಅಗತ್ಯವಾಗಿದೆ ಎಂದು ಅವರು ಹೇಳಿದರು.
ರೈತರು ತಮ್ಮ ಬೇಡಿಕೆಗಳನ್ನು ಮುಂದಿಡಲು ಅಗತ್ಯವಾದ ರಾಜಕೀಯ ಶಕ್ತಿ ಅವರಿಗೆ ಮತದಾನದ ಹಕ್ಕಿನಿಂದ ದೊರೆಯುತ್ತದೆ. ಭಾರತದ ಸಂವಿಧಾನ ನಾಗರಿಕರಿಗೆ ನೀಡಿರುವ ಈ ಹಕ್ಕು ಪ್ರಜಾಪ್ರಭುತ್ವದ ಪ್ರಮುಖ ಆಧಾರವಾಗಿದೆ. ಆದರೆ, ಎಸ್ಐಆರ್ ಪ್ರಕ್ರಿಯೆಯ ಮೂಲಕ ಜನರನ್ನು ದೇಶದ ನಾಗರಿಕರೇ ಅಲ್ಲ ಎಂಬ ಸ್ಥಿತಿಗೆ ತಳ್ಳುವ ಆತಂಕವಿದೆ. ಇದು ನಾಗರಿಕರ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವ ಅಪಾಯವನ್ನು ಹೊಂದಿದೆ ಎಂದು ಅವರು ಎಚ್ಚರಿಸಿದರು.
ರೈತರು ಸೇರಿದಂತೆ ಜನಸಾಮಾನ್ಯರು ತಮ್ಮ ಬೇಡಿಕೆಗಳನ್ನು ಮುಂದಿಟ್ಟಾಗ ಸರಕಾರ ಸ್ಪಂದಿಸದಿದ್ದರೆ, ಅದಕ್ಕಿಂತ ದೊಡ್ಡ ಮಟ್ಟದ ಜನಾಂದೋಲನವನ್ನು ರೂಪಿಸಬೇಕಾಗುತ್ತದೆ. ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುವವರೆಗೂ ದೇಶದ ಪ್ರಜಾಪ್ರಭುತ್ವದ ಭವಿಷ್ಯ ಸುರಕ್ಷಿತವಾಗಿರುವುದಿಲ್ಲ. ಹೀಗಾಗಿ, ಎಸ್ಐಆರ್ ವಿರುದ್ಧದ ಹೋರಾಟವನ್ನು ಎಲ್ಲ ಜನವರ್ಗಗಳೂ ತಮ್ಮ ಹಕ್ಕುಗಳ ರಕ್ಷಣೆಯ ಹೋರಾಟವೆಂದು ಪರಿಗಣಿಸಬೇಕು ಎಂದು ಶಿವಸುಂದರ್ ಕರೆ ನೀಡಿದರು.
ರೈತ ಹೋರಾಟಗಾರ್ತಿ ಚುಕ್ಕಿ ನಂಜುಡಸ್ವಾಮಿ ಮಾತನಾಡಿ, ಅ.23ರಂದು ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಕರೆಯ ಮೇರೆಗೆ ರಾಜ್ಯಾದ್ಯಂತ ಎಸ್ಐಆರ್ ವಿರುದ್ಧ ಹೋರಾಟ ನಡೆಯಲಿದೆ. ಈ ಹೋರಾಟದಲ್ಲಿ ರೈತ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಬೇಕು. ರೈತ ಸಂಘಟನೆಗಳು ಸಾಮಾನ್ಯವಾಗಿ ಸಾಲಮನ್ನಾ, ಬೀಜ, ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಬೆಳೆ ವಿಮೆಯಂತಹ ರೈತರ ಸಮಸ್ಯೆಗಳಿಗಾಗಿ ಹೋರಾಡುತ್ತವೆ ಎಂದರು.
ಆದರೆ, ಎಸ್ಐಆರ್ ಗೂ ರೈತರಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಉಳಿದಿದ್ದರೆ ಮಾತ್ರ ರೈತರು ತಮ್ಮ ಬೇಡಿಕೆಗಳಿಗಾಗಿ ಸರಕಾರವನ್ನು ಪ್ರಶ್ನಿಸಲು ಮತ್ತು ತಮ್ಮ ಧ್ವನಿಯನ್ನು ಪರಿಣಾಮಕಾರಿಯಾಗಿ ಕೇಳಿಸಲು ಸಾಧ್ಯ. ಮತದಾನದ ಹಕ್ಕೇ ಇಲ್ಲದಿದ್ದರೆ ನಮ್ಮ ಕೂಗನ್ನು ಯಾವ ಸರಕಾರವೂ ಕೇಳುವುದಿಲ್ಲ. ಆದುದರಿಂದ ಎಸ್ಐಆರ್ ವಿರುದ್ಧದ ಹೋರಾಟವು ರೈತರ ಹಕ್ಕುಗಳ ರಕ್ಷಣೆಯ ಹೋರಾಟವೂ ಆಗಿದೆ ಎಂದು ಚುಕ್ಕಿ ನಂಜುಡಸ್ವಾಮಿ ಹೇಳಿದರು.