×
Ad

ಜು.19ಕ್ಕೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸಮಾವೇಶ

Update: 2025-06-21 23:41 IST

ಬೆಂಗಳೂರು : ಕೇಂದ್ರ ಸರಕಾರದ ನೂತನ ವಕ್ಫ್ ತಿದ್ದುಪಡಿ ಕಾನೂನು-2025ರ ವಿರುದ್ಧ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನೇತೃತ್ವದಲ್ಲಿ ಜು.19ರಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಮೀಯತ್ ಉಲಮಾ ಹಿಂದ್ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ತಿಳಿಸಿದ್ದಾರೆ.

ಶನಿವಾರ ನಗರದ ಮಸ್ಜಿದೆ ಖಾದ್ರಿಯಾದಲ್ಲಿ ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸಮಾವೇಶದ ಕುರಿತು ಚರ್ಚಿಸಲು ಬೆಂಗಳೂರಿನ ಎಲ್ಲ ಮಸೀದಿಗಳ ಒಕ್ಕೂಟಗಳ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಅವರು ಮಾತನಾಡಿದರು.

ವಕ್ಫ್ ತಿದ್ದುಪಡಿ ಕಾನೂನಿನ ವಿರುದ್ಧ ದೇಶದಾದ್ಯಂತ ಮುಸ್ಲಿಮರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಈ ಕಾನೂನಿನ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅರ್ಜಿಗಳು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಆದರೂ, ನಾವು ನಮ್ಮ ವಿರೋಧವನ್ನು ನಿಲ್ಲಿಸಬಾರದು ಎಂದು ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.

ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರ ನೇತೃತ್ವದಲ್ಲಿ ಎಲ್ಲ ಸಮಾವೇಶಗಳು ನಡೆಯಲಿವೆ. ಇವುಗಳ ಯಶಸ್ಸಿಗಾಗಿ 21 ಮಂದಿಯನ್ನು ಒಳಗೊಂಡ ಕೋರ್ ಕಮಿಟಿಯನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ನಡೆದ ‘ವಕ್ಫ್ ರಕ್ಷಿಸಿ, ಸಂವಿಧಾನ ರಕ್ಷಿಸಿ’ ಚಳವಳಿಯಲ್ಲಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಬಿಹಾರದ ಪಾಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭಾಗವಹಿಸಿದ್ದರು. ಅದೇ ರೀತಿ, ಹೈದರಾಬಾದ್, ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿಯೂ ಚಳವಳಿ ನಡೆಸಲಾಗಿದೆ. ನಮ್ಮ ರಾಜ್ಯದ ಮಂಗಳೂರು, ಗುಲ್ಬರ್ಗ, ಕೋಲಾರ, ಮಂಡ್ಯ ಹಾಗೂ ಶಿವಮೊಗ್ಗ ಭಾಗದಲ್ಲಿ ಹೋರಾಟಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಮೌಲಾನಾ ಇಜಾಝ್ ಅಹ್ಮದ್ ನದ್ವಿ, ಡಾ.ಮುಹಮ್ಮದ್ ಸಾದ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮುಫ್ತಿ ಶಂಸುದ್ದೀನ್ ಬಜ್ಲಿ, ಅಫ್ಸರ್ ಬೇಗ್ ಖಾದ್ರಿ, ಮೌಲಾನಾ ಆಸಿಮ್ ಅಬ್ದುಲ್ಲಾ, ಮೌಲಾನಾ ಝೈನುಲ್ ಆಬಿದೀನ್, ಮಸ್ಜಿದೆ ಉಮ್ಮುಲ್ ಹಸ್ನೈನ್ ಅಧ್ಯಕ್ಷ ಅಬ್ದುರ‌್ರಹ್ಮಾನ್ ಖಾನ್ ಮತ್ತಿತರರು ಉಪಸ್ಥಿತರಿದ್ದರು. ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ಹುಸೇನಿ ನದ್ವಿ ನಿರೂಪಿಸಿದರು. ಜುಮಾ ಮಸ್ಜಿದ್ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ವಂದಿಸಿದರು.

► ಜೂ.23ರಂದು ಶಾಸಕರ ಭವನದಲ್ಲಿ ದುಂಡು ಮೇಜಿನ ಸಭೆ

► ಜೂ.26ರಂದು ಖಾದ್ರಿಯ ಮಸೀದಿಯಲ್ಲಿ ಉಲಮಾಗಳ ಸಮಾವೇಶ

► ಜು.4ರಂದು ಬೃಹತ್ ಮಾನವ ಸರಪಳಿ

► ಜು.12ರಂದು ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಮಹಿಳೆಯರ ಸಮಾವೇಶ

► ಜು.19ರಂದು ಅರಮನೆ ಮೈದಾನದಲ್ಲಿ ಬಹಿರಂಗ ಸಮಾವೇಶ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News