×
Ad

ಚುನಾವಣಾ ಅಫಿಡವಿಟ್‍ನಲ್ಲಿ ಅಪೂರ್ಣ ಮಾಹಿತಿ ನೀಡಿದ ಆರೋಪ: ಎಚ್‍ಡಿಕೆ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2023-12-04 23:20 IST

ಬೆಂಗಳೂರು: ಚುನಾವಣಾ ಸಂದರ್ಭಗಳಲ್ಲಿ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಪೂರ್ಣ ಪ್ರಮಾಣದ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಿ.ಎಸ್.ಸಿದ್ಧರಾಜು ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

2004ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೇತನಗಾನಹಳ್ಳಿಯಲ್ಲಿ 24 ಎಕರೆ ಜಮೀನಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಇತ್ತೀಚಿಗೆ ಮಾಧ್ಯಮಗಳಲ್ಲಿ ಮಾತನಾಡುವಾಗ ವಿವಿಧ ಸರ್ವೇ ನಂಬರ್ ಗಳಲ್ಲಿ 1,2,3,4 ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ.

ತಮ್ಮ ತಾಯಿಯ ಸಹೋದರಿ ಸಾವಿತ್ರಮ್ಮ ಅವರಿಂದ ದಾನ ಪಡೆದಿರುವುದಾಗಿಯೂ ತಿಳಿಸಿದ್ದಾರೆ. ಹಾಗಾದರೆ ಸಾವಿತ್ರಮ್ಮನವರಿಗೆ ಕುಮಾರಸ್ವಾಮಿ ಬೇನಾಮಿಯಾಗಿದ್ದಾರಾ, ಅಥವಾ ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.

2018ರ ಚುನಾವಣೆಯ ಅಫಿಡವಿಟ್‍ನಲ್ಲಿ 2008ರಲ್ಲಿ ಜೆ.ಪಿ ನಗರದ ಮನೆಯನ್ನು ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. ಆದರೆ, 2023ರ ಚುನಾವಣೆಯಲ್ಲಿ ಅದೇ ಮನೆಯನ್ನು 1995ರಲ್ಲಿ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ 9 ಕೋಟಿ 50 ಲಕ್ಷ ರೂ. ಸಾಲ ಪಡೆರುವುದಾಗಿ ಹೇಳಿದ್ದಾರೆ.

2018ರ ರಾಮನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ 50 ಲಕ್ಷ ಹಾಗೂ 4 ಕೋಟಿ ರೂ. ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. 2022ರಲ್ಲಿ ಕುಪೇಂದ್ರ ರೆಡ್ಡಿಯವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಚೆನ್ನಾಂಬಿಕ ಫಿಲ್ಸ್ಮ್ ಸಂಸ್ಥೆಗೆ 4 ಕೋಟಿ ರೂ. ಸಾಲ ಕೊಟ್ಟಿರುವುದಾಗಿ ಘೋಷಿಸಿಕೊಂಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೂರ್ಣ ಪ್ರಮಾಣದ ಮಾಹಿತಿ ನೀಡದೇ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಸಿ.ಎಸ್.ಸಿದ್ಧರಾಜು ಲೋಕಾಯುಕ್ತಕ್ಕೆ ದೂರಿನಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News