×
Ad

ಸಮವಸ್ತ್ರ ನೀತಿಯ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನವಾಗಲಿ : ಎಪಿಸಿಆರ್

Update: 2026-05-14 22:28 IST

ಸಾಂದರ್ಭಿಕ ಚಿತ್ರ | (File Photo)

ಬೆಂಗಳೂರು, ಮೇ 14 : 2022ರಲ್ಲಿ ಬಿಜೆಪಿ ಸರಕಾರ ರೂಪಿಸಿದ್ದ ತಾರತಮ್ಯ ಆಧಾರಿತ ಸಮವಸ್ತ್ರ ಆದೇಶವನ್ನು ಹಿಂಪಡೆದು ಎಲ್ಲರನ್ನೂ ಒಳಗೊಳ್ಳುವ ಸಮವಸ್ತ್ರ ನಿಯಮವನ್ನು ರೂಪಿಸಿ ನೂತನ ಆದೇಶ ಹೊರಡಿಸಿರುವ ರಾಜ್ಯ ಸರಕಾರದ ನಿರ್ಧಾರವನ್ನು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಕರ್ನಾಟಕವು ಸ್ವಾಗತಿಸುತ್ತದೆ ಎಂದು ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಎಪಿಸಿಆರ್ ಮತ್ತು ಇತರ ನ್ಯಾಯಪರರು ಜೊತೆಗೂಡಿ ಸುಪ್ರೀಂ ಕೋರ್ಟ್‍ನಲ್ಲಿ ನಡೆಸುತ್ತಿರುವ ಕಾನೂನಿನ ಹೋರಾಟದ ಆಶಯಕ್ಕೆ ಪೂರಕವಾದ ಸರಕಾರದ ನಿರ್ಧಾರವು ಬಹುತ್ವ ಭಾರತದ ಮೌಲ್ಯಗಳನ್ನು ಎತ್ತಿ ಹಿಡಿದಿರುವ ಸಂಕೇತ. ಶಾಲಾ-ಕಾಲೇಜು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿದ್ದಕ್ಕಾಗಿ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕನ್ನು ನಿರಾಕರಿಸಿ, ಸಾವಿರಾರು ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ಅನಿವಾರ್ಯಕ್ಕೆ ದೂಡಿದ್ದರು.

ಇದರಿಂದ ಬಹುತೇಕ ವಿದ್ಯಾರ್ಥಿಗಳ ಭವಿಷ್ಯವು ಅತಂತ್ರವಾಗಿತ್ತು, ಅಂದಿನ ಬಿಜೆಪಿ ಸರಕಾರವು ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಧ್ರುವೀಕರಣಕ್ಕಾಗಿ ಬಳಸಿಕೊಳ್ಳುವ ಮೂಲಕ ಮಕ್ಕಳ ಮನಸ್ಸಿನಲ್ಲಿ ದ್ವೇಷದ ಮನೋಭಾವನೆಯನ್ನು ಬಿತ್ತಿ, ಐತಿಹಾಸಿಕ ಕೀಳುಮಟ್ಟದ ರಾಜಕೀಯವನ್ನು ಪ್ರದರ್ಶಿಸಿತ್ತು. ಅಂದಿನ ಸರಕಾರವು ಜಾತ್ಯತೀತ ಮತ್ತು ಸೌಹಾರ್ದ ಪರಂಪರೆಗೆ ತಿಲಾಂಜಲಿ ಇಟ್ಟಿತ್ತು. ನ್ಯಾಯದ ಮತ್ತು ಸಾಂವಿಧಾನಿಕ ಮೌಲ್ಯಗಳ ಪರವಾಗಿ ಇರಬೇಕಾಗಿದ್ದ ಸರಕಾರವು ಮತೀಯ ಭಾವನೆಗಳ ಆಧಾರದಲ್ಲಿ ರಾಜಕೀಯ ನಡೆಸುವ ಮೂಲಕ ತಾರತಮ್ಯ ನೀತಿಯನ್ನು ಅನುಸರಿಸಿತ್ತು ಎಂದು ಆರೋಪಿಸಿದ್ದಾರೆ.

ಸಾಂಸ್ಕೃತಿಕ ವೈವಿಧ್ಯತೆಗೆ ಪೂರಕವಾದ ಸಮವಸ್ತ್ರವನ್ನು ಅಳವಡಿಸಿಕೊಳ್ಳಬೇಕಾದ ಶಿಕ್ಷಣ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಒಂದು ಸಮುದಾಯವನ್ನು ಶಿಕ್ಷಣದಿಂದ ಹೊರಗಿಡುವ ಏಕರೂಪ ಸಮವಸ್ತ್ರ ನೀತಿಯನ್ನು ಅಳವಡಿಸಿಕೊಳ್ಳುವಂತೆ ಮತ್ತು ಅದನ್ನೇ ಸಮಾನತೆಯಂತೆ ಬಿಂಬಿಸಿ ಸಂವಿಧಾನ ನೀಡಿದ ಆಯ್ಕೆ ಸ್ವಾತಂತ್ರ್ಯ ಹಾಗೂ ಒಳಗೊಳ್ಳುವ ಸಮವಸ್ತ್ರ ನೀತಿಯನ್ನು ನಿರಾಕರಿಸಿದ ಬೆಳವಣಿಗೆಗಳು ಶೈಕ್ಷಣಿಕ ದಾಖಲಾತಿಗೆ ಹಿನ್ನಡೆಯಾಗಿರುವುದನ್ನು ಇಡೀ ಸಮಾಜ ಸಾಕ್ಷಿಯಾಗಿತ್ತು ಎಂಬುದು ದುರದೃಷ್ಟಕರ ಎಂದು ಅವರು ಟೀಕಿಸಿದ್ದಾರೆ.

ನೂತನ ಆದೇಶವು ಸರ್ವಜನ ಸಮುದಾಯದ ಸಾಂಸ್ಕೃತಿಕ ವೈವಿಧ್ಯತೆಗೆ ಪೂರಕವಾಗಿ ತನ್ನ ಸಮವಸ್ತ್ರ ನೀತಿಯನ್ನು ಅಳವಡಿಸಿಕೊಳ್ಳುವಂತೆ ಹಾಗೂ ಸಮವಸ್ತ್ರ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯೂ ಶಿಕ್ಷಣ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರಕಾರದ ಮತ್ತು ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿದೆ. ಶಾಲಾ-ಕಾಲೇಜಿನ ವಾತಾವರಣವು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಹೊಂದಿರಬೇಕಾದುದು ಬಹುತ್ವ ಸಮಾಜದ ಅಗತ್ಯ. ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ನೂತನ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸುಧೀರ್ ಕುಮಾರ್ ಮುರೊಳ್ಳಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News