×
Ad

ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸುವುದು ಸಾಂವಿಧಾನಿಕ ಹಕ್ಕು ಉಲ್ಲಂಘನೆ : ಪುರುಷೋತ್ತಮ ಬಿಳಿಮಲೆ

Update: 2026-05-14 22:11 IST

ಬೆಂಗಳೂರು, ಮೇ 14 : ರಾಜ್ಯದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಿದರೆ ಶಾಲಾ ಆಡಳಿತ ಮಂಡಳಿಗಳು ದಂಡ ವಿಧಿಸುತ್ತಿರುವ ದೂರುಗಳು ಪ್ರಾಧಿಕಾರದ ಗಮನಕ್ಕೆ ಬಂದಿವೆ. ಈ ಕ್ರಮವು ಕೇವಲ ಶಿಕ್ಷಣ ವಿರೋಧಿಯಲ್ಲದೆ, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯೂ ಆಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಪ್ರಕಾರ ಕರ್ನಾಟಕದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ಮತ್ತು ಪ್ರಸಾರಕ್ಕೆ ಪೂರಕವಾದ ವಾತಾವರಣವಿರಬೇಕು. ತಾಯ್ನುಡಿಯಲ್ಲಿ ಮಾತನಾಡುವುದನ್ನು ನಿರ್ಬಂಧಿಸುವುದು ಅಥವಾ ದಂಡ ವಿಧಿಸುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಮಗುವಿನ ಸಾಮಾಜಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿ ಕ ಬೆಳವಣಿಗೆಯಲ್ಲಿ ತಾಯ್ನುಡಿಯು ಪ್ರಮುಖ ಪಾತ್ರ ವಹಿಸುತ್ತದೆ. ಮಾತೃಭಾಷೆಯಲ್ಲಿ ಸಂವಹನ ನಡೆಸುವುದರಿಂದ ವಿದ್ಯಾರ್ಥಿಗಳ ಪದ ಸಂಪತ್ತು ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅನೇಕ ಶೈಕ್ಷಣಿಕ ಅಧ್ಯಯನಗಳು ದೃಢಪಡಿಸಿವೆ ಎಂದು ಹೇಳಿದ್ದಾರೆ.

ಈ ಹಿಂದೆ ಬೆಂಗಳೂರಿನ ಸಿಂಧಿ ಶಾಲೆಯಂತಹ ಪ್ರಕರಣಗಳಲ್ಲಿ ಪ್ರಾಧಿಕಾರವು ಮಧ್ಯಪ್ರವೇಶಿಸಿ ತನಿಖೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಿದೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎಚ್ಚರಿಸುತ್ತದೆ. ರಾಜ್ಯದ ಎಲ್ಲಾ ಇಂಗ್ಲಿಷ್ ಮಾಧ್ಯಮ ಶಾಲೆಗಳೂ ಸೇರಿದಂತೆ ಪ್ರತಿಯೊಂದು ಶಿಕ್ಷಣ ಸಂಸ್ಥೆಯು ಈ ಕೂಡಲೇ ಜಾರಿಗೆ ಬರುವಂತೆ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಅಮಾನವೀಯ ಪದ್ಧತಿಯನ್ನು ಕೈಬಿಡಬೇಕು. ಈ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ಶಿಕ್ಷಣ ಸಚಿವರಿಗೆ ಸೂಚಿಸಿದ್ದಾರೆ.

ತಾಯ್ನುಡಿಯಲ್ಲಿ ಮಾತನಾಡುವುದು ಮಗುವಿನ ಜನ್ಮಸಿದ್ಧ ಹಕ್ಕು. ಈ ಹಕ್ಕನ್ನು ಕಸಿದುಕೊಳ್ಳುವ ಅಥವಾ ಕನ್ನಡವನ್ನು ಅಪರಾಧದಂತೆ ಕಾಣುವ ಯಾವುದೇ ಶಾಲೆಯ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಫಾರಸು ಮಾಡುತ್ತದೆ. ಕರ್ನಾಟಕದ ಮಣ್ಣಿನಲ್ಲಿ ಕನ್ನಡವು ಸಾರ್ವಭೌಮ ಭಾಷೆಯಾಗಿದ್ದು, ಶಾಲಾ ಆವರಣಗಳು ಕನ್ನಡದ ಕಲಿಕೆಗೆ ಪೂರಕವಾಗಿರಬೇಕೇ ಹೊರತು ದಂಡನೆಯ ತಾಣಗಳಾಗಬಾರದು ಎಂದು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News