ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬಾಲಕಿಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ
ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ
ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಿಲುಕಿ ಸಾವನ್ನಪ್ಪಿದ 13 ವರ್ಷದ ಬಾಲಕಿ ದಿವ್ಯಾಂಶಿಯ ಮರಣೋತ್ತರ ಪರೀಕ್ಷೆ ವೇಳೆ ಚಿನ್ನಾಭರಣ ಕಳವು ಮಾಡಿದ ಪ್ರಕರಣದಡಿ ಶವಾಗಾರದ ಸಿಬ್ಬಂದಿಯನ್ನು ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ಸ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸ್ಟಾಲಿನ್ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಾಲಕಿಯ ತಾಯಿ ಅಶ್ವಿನಿ ಎಂಬುವರು ಜುಲೈ 24ರಂದು ನೀಡಿದ ದೂರನ್ನು ಆಧರಿಸಿ ಆರೋಪಿತ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಕಳವು ಮಾಡಿದ್ದ ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಿವೇಕನಗರ ಮಾಯಾಬಜಾರ್ ಸ್ಲಂನಲ್ಲಿ ವಾಸವಾಗಿದ್ದ ಆರೋಪಿಯು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ. ಕುಡಿತ ಹೆಚ್ಚಾಗಿದ್ದರಿಂದ ಈತನನ್ನು ಕೆಲಸದಿಂದ ಬಿಡಿಸಲಾಗಿತ್ತು. ಜೂ.4ರಂದು ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಏಕಾಏಕಿ 6ಕ್ಕಿಂತ ಹೆಚ್ಚು ಮೃತದೇಹಗಳು ಬಂದಿದ್ದವು. ಹೀಗಾಗಿ, ಸಿಬ್ಬಂದಿಯೊಬ್ಬರು ಕರೆ ಮಾಡಿ ಆರೋಪಿಯನ್ನು ಕರೆಯಿಸಿಕೊಂಡಿದ್ದರು. ದುರ್ಘಟನೆ ವೇಳೆ ದಿವ್ಯಾಂಶಿಯ ಶವ ಪರೀಕ್ಷೆ ವೇಳೆ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದಿವ್ಯಾಂಶಿ ವೈದ್ಯಕೀಯ ಪರೀಕ್ಷೆ ವೇಳೆ ಬಾಲಕಿ ಧರಿಸಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 6 ಗ್ರಾಂ ಚಿನ್ನದ ಕಿವಿಯೋಲೆ ಹಾಗೂ 5 ರಿಂದ 6 ಗ್ರಾಂ ಚಿನ್ನದ ಸರವನ್ನು ಎಗರಿಸಿದ್ದ. ಅಂದು ಕೆಲಸ ಮುಗಿದ ಬಳಿಕ ಕದ್ದ ಚಿನ್ನ ಸಮೇತ ಮನೆಗೆ ತೆರಳಿದ್ದ. ಕುಡಿದ ನಶೆಯಲ್ಲಿ ಮಾರ್ಗ ಮಧ್ಯೆ ಚಿನ್ನಾಭರಣವನ್ನು ಬೀಳಿಸಿಕೊಂಡಿರುವುದಾಗಿ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.