×
Ad

Bengaluru | ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ; 40 ಲಕ್ಷ ಮೌಲ್ಯದ 28 ಸಿಮ್ ಬಾಕ್ಸ್, 1,193 ಸಿಮ್ ಕಾರ್ಡ್‍ಗಳು ವಶಕ್ಕೆ

Update: 2025-12-05 00:07 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೇಶದ ಆರ್ಥಿಕ ವ್ಯವಸ್ಥೆ ಹಾಗೂ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಈ ವೇಳೆ 40 ಲಕ್ಷ ಮೌಲ್ಯದ 28 ಸಿಮ್ ಬಾಕ್ಸ್‌ ಗಳು, ವಿವಿಧ ಕಂಪೆನಿಗಳ 1,193 ಸಿಮ್ ಕಾರ್ಡ್‍ಗಳು ಒಂದು ಲ್ಯಾಪ್ ಟಾಪ್, ಮೂರು ರೂಟರ್ಸ್, ಒಂದು ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನಾಯ್ಡು ಲೇಔಟ್‍ನಲ್ಲಿರುವ ಕಟ್ಟಡವೊಂದರ ನಾಲ್ಕನೇ ಮಹಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ಕೈಗೊಂಡು ಆರೋಪಿಗಳು ಮನೆ ಬಾಡಿಗೆ ಪಡೆದು ಕೃತ್ಯವೆಸಗುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಕೇರಳ ಮೂಲದ ಆರೋಪಿ ನೇತೃತ್ವದ ತಂಡವು ಹಿಂದಿನ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ಮಿನಿ ಟೆಲಿಫೋನ್ ಎಕ್ಸ್ ಚೇಂಜ್ ರೀತಿಯಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿಸಿಕೊಂಡಿತ್ತು. ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೇರಳ ಮೂಲದ ಆರೋಪಿ ಜೊತೆಗೆ ಕೃತ್ಯ ನಡೆಸುತ್ತಿದ್ದ ಮನೆಯ ಮಾಲಕ ಸಹ ನಾಪತ್ತೆಯಾಗಿದ್ದಾನೆ ಎಂದು ಸಿಸಿಬಿ ತಿಳಿಸಿದೆ.

ಆರೋಪಿಗಳು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ದೂರಸಂಪರ್ಕ ಇಲಾಖೆಗೆ ಆರ್ಥಿಕ ನಷ್ಟ ಹಾಗೂ ದೇಶದ ಭದ್ರತೆಗೆ ಅಡ್ಡಿ ಉಂಟು ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಈ ಕಾರ್ಯಾಚರಣೆಯ ತನಿಖಾ ವರದಿ ಬಂದ ಬಳಿಕ ಆರೋಪಿಗಳು ಎಷ್ಟು ಪ್ರಕರಣಗಳಲ್ಲಿ ಸಿಮ್‍ಕಾರ್ಡ್ ನಂಬರ್‍ಗಳನ್ನು ಬಳಸಿ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದು ಗೊತ್ತಾಗಲಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News