ಬೆಂಗಳೂರು : ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಕಾರ್ಯವಿಧಾನಗಳು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಪತ್ರಿಕೋದ್ಯಮ ಶಿಕ್ಷಣವನ್ನು ಕಾಲೋಚಿತಗೊಳಿಸುವುದು ಮತ್ತು ಸರಕಾರಿ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಶಾ ಖಾನಂ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಭೇಟಿಯಾಗಿ, ಹಿರಿಯ ಪತ್ರಕರ್ತ ಡಾ.ನಾಡಿಗ ಕೃಷ್ಣಮೂರ್ತಿ ಅವರ ‘ಭಾರತೀಯ ಪತ್ರಿಕೋದ್ಯಮ’ ಕೃತಿಯನ್ನು ನೀಡಿ ಅವರು ಮಾತನಾಡಿದರು.

ರಾಜ್ಯದ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ, ಪತ್ರಿಕೋದ್ಯಮ ವಿಭಾಗಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಅಗತ್ಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ಬೆಂಬಲದ ಕುರಿತು ಸಚಿವರಿಗೆ ವಿವರಿಸಿದರು.

ಪತ್ರಿಕೋದ್ಯಮ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ವಿಭಾಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಕಾರದ ಅಗತ್ಯ ಮಧ್ಯಪ್ರವೇಶ ಮತ್ತು ಸಹಕಾರ ನೀಡುವಂತೆ ಆಯೇಶಾ ಖಾನಂ ಮನವಿ ಮಾಡಿದರು.

ಆಯೇಶಾ ಖಾನಂ ಅವರ ಮನವಿಯನ್ನು ಆಲಿಸಿದ ಸಚಿವರು, ಪತ್ರಿಕೋದ್ಯಮ ಶಿಕ್ಷಣದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ಕುರಿತು ಮಾಧ್ಯಮ ಅಕಾಡಮಿಯೊಂದಿಗೆ ಶೀಘ್ರದಲ್ಲೇ ಮತ್ತಷ್ಟು ಚರ್ಚೆ ನಡೆಸುವುದಾಗಿ ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ, ಕರ್ನಾಟಕ ಮಾಧ್ಯಮ ಅಕಾಡಮಿಯ ಕಾರ್ಯದರ್ಶಿ ಎನ್.ಎಸ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor