Bengaluru | ವಂಚನೆ ಆರೋಪ; ಆರ್‍ಟಿಐ ಕಾರ್ಯಕರ್ತನ ಬಂಧನ
ಬೆಂಗಳೂರು : ಅರಣ್ಯಾಧಿಕಾರಿ ಎಂದು ಹೇಳಿಕೊಂಡು ಲೋಕಾಯುಕ್ತ ಸಂಸ್ಥೆಯ ಲೆಟರ್ ಹೆಡ್‍ಗಳನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದ ಆರೋಪದಡಿ ಮಾಹಿತಿ ಹಕ್ಕು(ಆರ್‍ಟಿಐ) ಕಾರ್ಯಕರ್ತನೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೋಲಾರ ಮೂಲದ ಬಿ.ಮುರಳಿ ಎಂದು ಗುರುತಿಸಲಾಗಿದೆ.
ಆರೋಪಿ ಬಿ.ಮುರಳಿ ವಲಯ ಅರಣ್ಯಾಧಿಕಾರಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡಿದ್ದನು. ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಹೇಳಿಕೊಂಡು ಅವರಿಂದ ಹಣ ಪಡೆಯುತ್ತಿದ್ದನು. ಅಲ್ಲದೆ ಸಾರ್ವಜನಿಕರಿಂದಲೂ ಹಣ ವಸೂಲಿ ಮಾಡುತ್ತಿದ್ದನು. ಆದರೆ ಲೋಕಾಯುಕ್ತಕ್ಕೆ ದೂರು ನೀಡುತ್ತಿರಲಿಲ್ಲ.
ಲೋಕಾಯುಕ್ತ ಸಂಸ್ಥೆಯ ಲೆಟರ್ ಹೆಡ್ ದುರ್ಬಳಕೆ ಸಂಬಂಧ ನಿಬಂಧಕ ರುಡೋಲ್ಫ್ ಪಿರೇರಾ ಎಂಬುವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.