ನಟ ಅಂಬರೀಶ್ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ : ರಾಮಲಿಂಗಾರೆಡ್ಡಿ
ನಟ ಅಂಬರೀಶ್
ಬೆಂಗಳೂರು : ಮುಂಬರುವ ಕನ್ನಡ ರಾಜ್ಯೋತ್ಸವ ಅಥವಾ ಸೂಕ್ತ ಸಂದರ್ಭದಲ್ಲಿ ನಟ ಅಂಬರೀಶ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿರುವ ಅವರು, ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ, ಜನಪ್ರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರು ನಾಡಿನ ಕಲೆ, ಸಾಹಿತ್ಯ ಹಾಗೂ ರಾಜಕೀಯ ರಂಗಕ್ಕೆ ನೀಡಿದ ಸೇವೆ ಅಪಾರವಾದದ್ದು ಎಂದು ತಿಳಿಸಿದ್ದಾರೆ.
ಅಂಬರೀಶ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶಿಷ್ಟ ಅಭಿನಯ ಶೈಲಿಯಿಂದ ‘ರೆಬೆಲ್ ಸ್ಟಾರ್’ ಆಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಮತ್ತು ಕಲಾವಿದರ ಹಿತ ಕಾಯುವಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯ ರಂಗದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಟ ಅಂಬರೀಶ್ ಅವರ ಕೊಡುಗೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ, ಅವರಿಗೆ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಗೌರವಿಸುವುದು ಅತ್ಯಂತ ಸೂಕ್ತವಾಗಿದೆ. ಇದು ನನ್ನ ಹಾಗೂ ನಾಡಿನ ಸಮಸ್ತ ಜನತೆಯ ತೀವ್ರ ಆಶಯವಾಗಿದೆ ಎಂದು ಹೇಳಿದ್ದಾರೆ.