ಬೆಂಗಳೂರು : ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈ.ಡಿ.) ಅಧಿಕಾರಿಗಳು ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‍ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ ಗೀತಾ ಅವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಡಾಲರ್ಸ್ ಕಾಲನಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸದ ಮೇಲೆ ಈ.ಡಿ. ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲೇ ಇದ್ದ ಶಿವಶಂಕರಪ್ಪ ಅವರನ್ನು ವಿಚಾರಣೆ ನಡೆಸಿದ ಈಡಿ ಅಧಿಕಾರಿಗಳು, ಬಳಿಕ ಬಂಧಿಸಿದ್ದಾರೆ.

ಇದೇ ಪ್ರಕರಣದಲ್ಲಿ ಅಭ್ಯರ್ಥಿಗಳ ಜೊತೆ ನೇರ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿರುವ ಆರೋಪಿ ಕೆಪಿಎಸ್‍ಸಿ ಸದಸ್ಯೆ ಬಿ.ವಿ.ಗೀತಾ ಅವರ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಶಿವಶಂಕರಪ್ಪ ಅವರ ಸಂಬಂಧಿ ಸುಗುರೇಶ್ ತಪ್ಪೊಪ್ಪಿಗೆ ಮತ್ತು ಬಂಧಿತ ಕೆಪಿಎಸ್‍ಸಿ ಪರೀಕ್ಷಾ ನಿರೀಕ್ಷಕನಾಗಿದ್ದ ಜ್ಞಾನೇಂದ್ರ ಕುಮಾರ್ ಅವರ ಹೇಳಿಕೆ ಆಧರಿಸಿ ಈ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹಗರಣದಲ್ಲಿ ಬಂಧನದ ಭೀತಿ ಎದುರಿಸಿದ್ದ ಶಿವಶಂಕರಪ್ಪ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು, ಅದನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇದೀಗ ಇಡಿ ಅಧಿಕಾರಿಗಳು ಶಿವಶಂಕರಪ್ಪ ಅವರ ಮನೆ ದಾಳಿ ನಡೆಸಿ, ಅವರನ್ನು ಬಂಧಿಸಿದ್ದು, ಮಹತ್ವದ ದಾಖಲೆಗಳು ಹಾಗೂ ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor