ಚನ್ನಪಟ್ಟಣ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅನಿರೀಕ್ಷಿತ ಭೇಟಿ
ರಾಮನಗರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ರಾತ್ರಿ ವೇಳೆಯಲ್ಲಿ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಸೇವೆಗಳು ಹಾಗೂ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದ ಅವರು, ಆಸ್ಪತ್ರೆಯ ಐಸಿಯು ಘಟಕ, ವಿವಿಧ ವಾರ್ಡ್‍ಗಳು, ಶೌಚಾಲಯಗಳ ಸ್ವಚ್ಛತೆ, ಔಷಧಗಳ ಲಭ್ಯತೆಯನ್ನು ಪರಿಶೀಲಿಸಿದರು.
ಅಲ್ಲದೇ, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಹಾಗೂ ಅವರ ಕುಟುಂಬದವರೊಂದಿಗೆ ಮಾತನಾಡಿ, ಸರಕಾರಿ ಆಸ್ಪತ್ರೆಯ ಚಿಕಿತ್ಸೆಯ ಗುಣಮಟ್ಟ ಹಾಗೂ ಮಾತ್ರೆಗಳು ಸೇರಿದಂತೆ ಇತರೆ ಔಷಧಗಳನ್ನು ವೈದ್ಯರು ಸಮಪರ್ಕವಾಗಿ ನೀಡುತ್ತಿರುವ ಬಗ್ಗೆ ಖಾದರ್ ಮಾಹಿತಿ ಪಡೆದುಕೊಂಡರು.
ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಹಾಗೂ ಔಷಧೋಪಚಾರಗಳು ಇದ್ದಾಗ್ಯೂ ಕೂಡ ವೈದ್ಯರು ಬಡ ರೋಗಿಗಳಿಗೆ ಇತರೆ ವೈದ್ಯಕೀಯ ಪರೀಕ್ಷೆಗಳು ಹಾಗೂ ಔಷಧಗಳನ್ನು ಹೊರಗಿನಿಂದ ತರುವ ಪರಿಸ್ಥಿತಿ ತಲೆದೊರಬಾದರು ಎಂದು ಖಾದರ್ ಸ್ಥಳದಲ್ಲಿದ್ದವರಿಗೆ ಎಚ್ಚರಿಸಿದರು. ಆಸ್ಪತ್ರೆಯಲ್ಲಿರುವ ಎಲ್ಲ ಸೇವೆಗಳು ರೋಗಿಗಳಿಗೆ ಉಚಿತವಾಗಿ ಹಾಗೂ ನಿಗದಿತ ಅವಧಿಯೊಳಗೆ ಸೂಕ್ತವಾಗಿ ಲಭ್ಯವಾಗಬೇಕೆಂದು ಸೂಚಿಸಿದರು.
ಹಗಲಿರಲಿ, ರಾತ್ರಿಯಿರಲಿ ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಹಾಗೂ ಗೌರವಯುತ ಸೇವೆ ದೊರೆಯಬೇಕೆನ್ನುವುದು ಆರೋಗ್ಯ ಇಲಾಖೆಯ ಬದ್ಧತೆಯಾಗಿದೆ, ನಾಡಿನ ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಖಾದರ್ ಹೇಳಿದರು.
ಇಲ್ಲಿಗೆ ಬರುವ ರೋಗಿಗಳನ್ನು ಅನಗತ್ಯವಾಗಿ ಬೆಂಗಳೂರು, ಮಂಡ್ಯ ಸೇರಿದಂತೆ ದೂರದ ಆಸ್ಪತ್ರೆಗಳಿಗೆ ಕಳುಹಿಸಿಕೊಡಬಾರದು. ಆಸ್ಪತ್ರೆಯಲ್ಲಿಯೆ ಸಾಧ್ಯವಾದಷ್ಟು ಅಗತ್ಯ ಚಿಕಿತ್ಸೆ ಮತ್ತು ಸೇವೆಗಳನ್ನು ಒದಗಿಸಬೇಕು ಎಂದ ಅವರು, ಈ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ಆಸ್ಪತ್ರೆಯ ರಾತ್ರಿ ಪಾಳಿಯ ಅಧಿಕಾರಿಗಳು, ಸಿಬ್ಬಂದಿಗಳಿದ್ದರು.