×
Ad

ಬೆಂಗಳೂರು | ‘ಕರಗ’ ಮೈ ತಾಕಿದ್ದಕ್ಕೆ ಬಾಲಕನ ಹತ್ಯೆ ಆರೋಪ : ನಾಲ್ವರು ಅಪ್ರಾಪ್ತರು ವಶಕ್ಕೆ

Update: 2024-04-25 22:50 IST

ಬೆಂಗಳೂರು: ಬೆಂಗಳೂರು ಕರಗ ಮಹೋತ್ಸವದ ವೇಳೆ ನೃತ್ಯ ಮಾಡುವಾಗ ಅಚಾನಕ್ಕಾಗಿ ಮೈ ತಾಕಿದ್ದಕ್ಕೆ ಆಕ್ರೋಶಗೊಂಡು ಬ್ಲೇಡ್‍ನಿಂದ ಬಾಲಕನನ್ನು ಹತ್ಯೆ ಮಾಡಿದ ಆರೋಪದಡಿ ನಾಲ್ವರು ಅಪ್ರಾಪ್ತರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಸಾರಧಿ(17) ಎಂಬಾತ ಹತ್ಯೆಯಾದ ಬಾಲಕ ಎಂದು ಗುರುತಿಸಲಾಗಿದೆ. ಶೇಷಾದ್ರಿಪುರದ ಜೆಸಿಡಬ್ಲ್ಯೂ ಕಾಲೊನಿಯಲ್ಲಿ ವಾಸವಾಗಿದ್ದ ಈತ ಟೈಲ್ಸ್ ಕೆಲಸ ಮಾಡಿಕೊಂಡಿದ್ದ. ಐತಿಹಾಸಿಕ ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಅಣ್ಣಮ್ಮ ದೇವಸ್ಥಾನದ ಬಳಿ ಬಂದಿದ್ದ ಎನ್ನಲಾಗಿದೆ.

ಎ.24ರ ಬುಧವಾರ ಮುಂಜಾನೆ ಸುಮಾರು 3.30ರ ವೇಳೆ ನೃತ್ಯ ಮಾಡುತ್ತಿದ್ದ ವೇಳೆ ಸಾರಧಿಯ ಮೈ ಪಕ್ಕದಲ್ಲೇ ಡ್ಯಾನ್ಸ್ ಮಾಡುತ್ತಿದ್ದ ಅಪ್ರಾಪ್ತರಿಗೆ ತಾಕಿದೆ. ಇಷ್ಟಕ್ಕೆ ಆಕ್ರೋಶಗೊಂಡ ಅಪ್ರಾಪ್ತರು ವಾಗ್ವಾದಕ್ಕೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಗಲಾಟೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವೇಳೆ ಅಪ್ರಾಪ್ತರು ಹೂ ಮಾಲೆ ಕತ್ತರಿಸುವ ಬ್ಲೇಡ್‍ನಿಂದ ಸಾರಧಿ ಎದೆಗೆ ಚುಚ್ಚಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಬಾಲಕ ಮನೆಗೆ ತೆರಳಿದ್ದ. ಬಳಿಕ ವಿಪರೀತ ವಾಂತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಲಾಟೆ ವೇಳೆ ಎದೆಗೆ ಚುಚ್ಚಿದ ಬ್ಲೇಡ್‍ನಿಂದ ಹೃದಯಕ್ಕೆ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ. ಹತ್ಯೆ ಪ್ರಕರಣ ದಾಖಲಿಸಿಕೊಂಡು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News