×
Ad

ವಿಧಾನಸೌಧದ ಪ್ರವೇಶ ದ್ವಾರಗಳ ಅಭಿವೃದ್ದಿ: ಸ್ಪೀಕರ್ ಯು.ಟಿ.ಖಾದರ್

Update: 2026-03-09 18:27 IST

ಬೆಂಗಳೂರು : ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ನಾಲ್ಕು ಪ್ರವೇಶ ದ್ವಾರಗಳನ್ನು ತಲಾ 80 ರಿಂದ 90 ಲಕ್ಷ ರೂ.ಗಳ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಧಾನಸಭೆ ಸಭಾಂಗಣ ಪ್ರವೇಶಿಸುವ ಮುಖ್ಯದ್ವಾರಗಳನ್ನು ವಿನ್ಯಾಸಗೊಳಿಸಿ ಪುನರ್ ಅಭಿವೃದ್ಧಿಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ವಿಧಾನಸೌಧದ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಾಲ್ಕು ದ್ವಾರಗಳನ್ನು ರೋಜ್‍ವುಡ್‍ನಲ್ಲಿ ಕಸುರಿ ಕೆಲಸದೊಂದಿಗೆ ಪುನರ್ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಪ್ರತಿ ದ್ವಾರಕ್ಕೆ 80 ಲಕ್ಷ ರೂ.ನಿಂದ 90ಲಕ್ಷ ರೂ.ಗಳ ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ಅರಣ್ಯ ಅಭಿವೃದ್ಧಿ ಮಂಡಳಿ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಕಾಮಗಾರಿ ನಿರ್ವಹಣೆ ಮಾಡುತ್ತಿದೆ ಎಂದ ಅವರು, ವಿಧಾನಸೌಧವು ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಸಾರ್ವಜನಿಕರ ಆಕರ್ಷಣೆಯ ಕೇಂದ್ರವೂ ಆಗಿದೆ ಎಂದು ಅವರು ತಿಳಿಸಿದರು.

ಜನರು ತಮ್ಮ ತಲೆಯಲ್ಲಿ ಬಹು ಆಲೋಚನೆಗಳನ್ನು ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೆ. ಅವರಿಗೆ ನಿರಾಶೆಯಾಗಬಾರದು. ಆ ನಿಟ್ಟಿನಲ್ಲಿ ನಾಲ್ಕು ಪ್ರವೇಶ ದ್ವಾರಗಳನ್ನು ಪುನಃ ಅಭಿವೃದ್ಧಿಪಡಿಸಿ ಆಕರ್ಷಣೀಯಗೊಳಿಸಲಾಗುತ್ತಿದೆ. ವಿಧಾನಸೌಧದ ಪ್ರವೇಶ ದ್ವಾರಗಳ ಪುನರ್ ಅಭಿವೃದ್ಧಿ ಕಾಮಗಾರಿ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶದ ನಿರ್ಬಂ ಧಗಳನ್ನು ವಿಧಿಸಲಾಗಿದೆ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News