×
Ad

ಬೆಂಗಳೂರು| 1,500 ರೂ.ಗಳ ವಿಚಾರಕ್ಕೆ ಜಗಳ: ಓರ್ವನ ಕೊಲೆ

Update: 2023-12-06 21:55 IST

ಬೆಂಗಳೂರು, ಡಿ.6: ಮದ್ಯದ ಅಮಲಿನಲ್ಲಿ 1,500 ರೂ.ಗಳ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಪರಪ್ಪನ ಅಗ್ರಹಾರದ ಸಿಂಗಸಂದ್ರದಲ್ಲಿ ವರದಿಯಾಗಿದೆ.

ಸಿಂಗಸಂದ್ರದ ಗೋಪಾಲ್ ಕೊಲೆಯಾದ ವ್ಯಕ್ತಿ. ಡಿ.5ರಂದು ಬಾರ್ ನಲ್ಲಿ ಗೋಪಾಲ್, ಕರೇಗೌಡ ಮತ್ತು ಶಶಿಧರ್ ಸೇರಿ ಮೂವರು ಮದ್ಯ ಸೇವನೆ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಪ್ರದೀಪ್ ಮತ್ತು ಗಿರೀಶ್ ಎನ್ನುವ ಮತ್ತಿಬ್ಬರು ಬಂದಿದ್ದರು.

ಎಲೆಕ್ಟ್ರಿಷಿಯನ್ ಕೆಲಸದ ಸಂಬಂಧ ಕರೇಗೌಡನಿಗೆ ಗಿರೀಶ್ 1,500 ರೂ. ಕೊಡಬೇಕಾಗಿತ್ತು. ಬಾರ್ ನಲ್ಲಿದ್ದ ಕರೇಗೌಡ ಮದ್ಯದ ಅಮಲಿನಲ್ಲಿ ಗಿರೀಶ್ ಕಂಡ ಕೂಡಲೇ ಹಣ ಕೊಡುವಂತೆ ಕೇಳಿದ್ದಾನೆ. ‘ಹಣ ಕೊಡುವುದಿಲ್ಲ ಅದೇನು ಮಾಡ್ಕೋತ್ತೀಯೋ ಮಾಡ್ಕೋ’ ಎಂದು ಗಿರೀಶ್ ಹೇಳಿದ್ದಾರೆ. ಇಬ್ಬರ ಸಂಭಾಷಣೆ ಮಧ್ಯೆ ಬಂದ ಸ್ನೇಹಿತ ಗೋಪಾಲ್, ಗಿರೀಶ್‍ಗೆ ಹೊಡೆದು ಕರೇಗೌಡಗೆ ಹಣ ಕೊಡಿಸಿದ್ದ.

ಅದಾದ ಬಳಿಕ ಗಿರೀಶ್ ಮನೆಗೆ ಗೋಪಾಲ್, ಕರೇಗೌಡ, ಶಶಿಧರ್ ಮೂವರು ಹೋಗಿದ್ದಾರೆ. ಗಿರೀಶ್‍ಗೆ ಸರಿಯಾಗಿ ಮಾತನಾಡುವಂತೆ ಆತನ ಪತ್ನಿಗೆ ದೂರು ಹೇಳುತ್ತಿದ್ದಾಗ ಅಡುಗೆ ಮನೆಯಿಂದ ಚಾಕು ತಂದು ಬೆನ್ನ ಹಿಂದೆ ಇಟ್ಟುಕೊಂಡಿದ್ದ ಗಿರೀಶ್, ಗೋಪಾಲ್‍ಗೆ ಚುಚ್ಚಿ ಪರಾರಿಯಾಗಿದ್ದ.

ಕೂಡಲೇ ಅಲ್ಲಿದ್ದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಗೋಪಾಲ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಆರೋಪಿ ಗಿರೀಶ್‍ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News