×
Ad

ನಾಳೆಯಿಂದ 16ನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Update: 2025-02-28 23:28 IST

ಬೆಂಗಳೂರು: ಹದಿನಾರನೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಾಳೆಯಿಂದ (ಮಾ.1) ಆರಂಭವಾಗಲಿದ್ದು, ‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ 60 ದೇಶಗಳ ಸುಮಾರು 200 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರ ಭಾಗವಾಗಿ ನಾಳೆ (ಮಾ.1)ಸಂಜೆ 5ಗಂಟೆ ಸುಮಾರಿಗೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಲನಚಿತ್ರೋತ್ಸವನ್ನು ಉದ್ಘಾಟಿಸಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ಹೇಳಿದ್ದಾರೆ.

ಶುಕ್ರವಾರ ವಾರ್ತಾ ಇಲಾಖೆ ಸಭಾಂಗಣದಲ್ಲಿ ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪರಿಕಲ್ಪನೆಯಲ್ಲಿ ನಡೆಯಲಿರುವ ಈ ಚಿತ್ರೋತ್ಸವದಲ್ಲಿ 60 ದೇಶಗಳ ಸುಮಾರು 200 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ನಟ ಡಾ.ಶಿವರಾಜ್‍ಕುಮಾರ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಪ್ರಕಟಿಸಿರುವ ಚಲನಚಿತ್ರಕ್ಕೆ ಸಂಬಂಧಿಸಿದ 5 ಪುಸ್ತಕಗಳನ್ನು ಹಾಗೂ ಚಿತ್ರೋತ್ಸವದ ಕೈಪಿಡಿ ಬಿಡುಗಡೆಗೊಳಿಸಲಿದ್ದಾರೆ. ಈ ಬಾರಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಗಳಾಗಿ ನಟ ಕಿಶೋರ್ ಕುಮಾರ್ ಆಯ್ಕೆಯಾಗಿದ್ದು, ಪೋಲೆಂಡ್ ರಾಯಭಾರಿ ಮೌಗುಜ್ಹಾತ ವೈಸಿಸ್ ಗೋವಿನ್ಬಿಯಾಖ್, ನಟಿ ಪ್ರಿಯಾಂಕಾ ಮೋಹನ್ ಹಾಗೂ ಎಂ. ನರಸಿಂಹಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಚಲನಚಿತ್ರೋತ್ಸವದಲ್ಲಿ 3ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದು, ಮೊದಲನೇ ದಿವಸವೇ 500ಕ್ಕೂ ಹೆಚ್ಚು ಜನ ನೋಂದಾಯಿಸುಕೊಂಡು ದಾಖಲೆ ನಿರ್ಮಿಸಿದ್ದಾರೆ. ಚಿತ್ರೋತ್ಸವ ಅಂಗವಾಗಿ ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಸಿನಿಮಾದ ಹೊಸ ಆಯಾಮಗಳ ಬಗ್ಗೆ ಚರ್ಚೆ ನಡೆಯಲಿದೆ. ಸಿನಿಮಾ ರಂಗದ ದಿಗ್ಗಜರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸ ತಂತ್ರಜ್ಞಾನದ ಮೂಲಕ ಸಿನಿಮಾ ತಯಾರಿಕೆ, ಛಾಯಾಗ್ರಾಹಣ, ಮಹಿಳಾ ಚಲನಚಿತ್ರ, ಕನ್ನಡ ಚಿತ್ರಗಳ ಆರ್ಥಿಕ ಸ್ಥಿತಿಗತಿ ಮುಂತಾದ ವಿಷಯಗಳ ಕುರಿತು ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಮಾರ್ಚ್ 1 ರಂದು ಉದ್ಘಾಟನಾ ಚಿತ್ರವಾಗಿ ‘ಪಯರ್’ ಹಿಂದಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಎಲ್ಲರು ಹೆಚ್ಚು ಸಿನಿಮಾ ವೀಕ್ಷಿಸಿ ಚಿತ್ರೋತ್ಸವವನ್ನು ಯಶಸ್ವಿಗೊಳಿಸಬೇಕು. ಮಾರ್ಚ್ 2 ರಂದು ವಿಶ್ವ ಕನ್ನಡ ಸಿನಿಮಾ ದಿನವನ್ನು ಒರಾಯನ್ ಮಾಲ್‍ನ ಸ್ಕ್ರೀನ್ 11ರಲ್ಲಿ ಏರ್ಪಡಿಸಲಾಗಿದ್ದು, ಕನ್ನಡದ ಮೊದಲ ವಾಕ್‍ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಯಾದ ಈ ದಿನವನ್ನು ನೆನಪಿಸಿಕೊಳ್ಳಲಾಗುವುದು. ಈ ಸಮಾರಂಭದಲ್ಲಿ ನಟ ಸೃಜನ್ ಲೋಕೇಶ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಮಾಧ್ಯಮ, ಸಿನಿಮಾ ರಂಗ, ಹೀಗೆ ಎಲ್ಲಾ ರಂಗದವರ ಸಹಕಾರ, ಪ್ರೋತ್ಸಾಹ ನಮಗೆ ಮುಖ್ಯವೆಂದು ಎಂದು ನುಡಿದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ಮಾತನಾಡಿ, ಈ ಚಿತ್ರೋತ್ಸವ ಪ್ರೇಕ್ಷಕರಿಗೆ ವಿವಿಧ ನೆಲ, ಭಾಷೆಯ ಚಲನಚಿತ್ರಗಳನ್ನು ಪರಿಚಯಿಸುತ್ತದೆ. ಜನರ ಸಹಕಾರವಿದ್ದರೆ ಚಲನಚಿತ್ರಗಳು, ಚಿತ್ರೋತ್ಸವಗಳು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ನಿರ್ದೇಶಕ ಎನ್.ವಿದ್ಯಾಶಂಕರ್, ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹಿಮಂತ್ ರಾಜು ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News