×
Ad

ಬೆಂಗಳೂರು | ಚಿಂದಿ ಆಯುವವನ ಯಡವಟ್ಟು: ಆತಂಕ ಸೃಷ್ಠಿಸಿದ್ದ ಸ್ಕ್ರಾಪ್ ಎಟಿಎಂ ಬಾಕ್ಸ್

Update: 2024-02-14 22:52 IST

ಬೆಂಗಳೂರು: ಚಿಂದಿ ಆಯುವವನ ಯಡವಟ್ಟಿನಿಂದಾಗಿ ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹೈರಾಣಾದ ಘಟನೆ ನಗರದ ಮಿನರ್ವ ಸರ್ಕಲ್ ಬಳಿ ವರದಿಯಾಗಿದೆ.

ಖಾಸಗಿ ಬ್ಯಾಂಕಿನ ಎಟಿಎಂ ಪಕ್ಕದಲ್ಲಿ ಚಿಂದಿ ಆಯುವವ ಇಟ್ಟಿದ್ದ ಬಾಕ್ಸ್ ಕಂಡು ಗಾಬರಿಯಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಬಂದು ತಪಾಸಣೆ ನಡೆಸಿದ ಬಳಿಕ ಅವು ಎರಡು ಸ್ಕ್ರಾಪ್ ಎಟಿಎಂ ಬಾಕ್ಸ್ ಗಳು ಎಂಬುದಾಗಿ ಗೊತ್ತಾಗಿದೆ.

ಫೆ.12ರ ಬೆಳಗ್ಗೆ 8.30ರ ಸುಮಾರಿಗೆ ಜೆಸಿ ರಸ್ತೆಯ ಮಿನರ್ವ ಸರ್ಕಲ್ ಬಳಿಯಿರುವ ಖಾಸಗಿ ಬ್ಯಾಂಕಿನ ಎಟಿಎಂ ಸಮೀಪದಲ್ಲಿ ಖಾಲಿ ಬಾಕ್ಸ್ ಗಳು ಪತ್ತೆಯಾಗಿದ್ದವು. ಅವುಗಳನ್ನು ಗಮನಿಸಿದ್ದ ಎಟಿಎಂ ಭದ್ರತಾ ಸಿಬ್ಬಂದಿಯೊಬ್ಬ ಹತ್ತಿರ ಹೋಗಿ ನೋಡಿದಾಗ ಇದೊಂದು ಎಟಿಎಂ ಮಷಿನ್‍ನಲ್ಲಿ ಹಣ ತುಂಬುವ ಬಾಕ್ಸ್ ಎಂಬುದು ಗೊತ್ತಾಗಿತ್ತು.

ತಕ್ಷಣ ಆತ ನಗರದ ಕಲಾಸಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಪೊಲೀಸರು ಅಕ್ಕಪಕ್ಕದ ಎಟಿಎಂ, ಬ್ಯಾಂಕ್‍ಗಳಲ್ಲಿ ಏನಾದರೂ ರಾಬರಿಯಾಗಿರಬಹುದಾ ಎಂದು ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿಸಿ ಪರಿಶೀಲಿಸಿದ್ದರು. ಆದರೆ, ಬಾಕ್ಸ್ ತೆರೆಸಿದಾಗ ಅವು ಎಟಿಎಂಗೆ ಹಣ ತುಂಬುವ ಎರಡು ಸ್ಕ್ರಾಪ್ ಬಾಕ್ಸ್ ಗಳು ಎಂಬುವುದು ತಿಳಿದುಬಂದಿದೆ.

ಈ ಸಂಬಂಧ ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದಾಗ, ಇದು ಚಿಂದಿ ಆಯುವ ವ್ಯಕ್ತಿಯ ಕೆಲಸ ಎಂದು ತಿಳಿದು ಬಂದಿದೆ. ಸದ್ಯ ಕಲಾಸಿಪಾಳ್ಯ ಪೊಲೀಸರು ಖಾಲಿ ಬಾಕ್ಸ್ ಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News