ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಡಿ: ರಾಜ್ಯ ಸರಕಾರಕ್ಕೆ ಬಸವರಾಜ ಬೊಮ್ಮಾಯಿ ಆಗ್ರಹ

Update: 2026-07-30 17:02 IST

ಹೊಸದಿಲ್ಲಿ : ಕರ್ನಾಟಕದಲ್ಲಿ ಪ್ರಸ್ತುತ ಕುಡಿಯುವ ನೀರಿಗೆ ಮಾತ್ರ ಸಾಲುವಷ್ಟು ನೀರಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ದಿಲ್ಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸುತ್ತಿರುವ ಕಾನೂನು ತಂಡ ಮತ್ತು ಪ್ರಾಧಿಕಾರಗಳಲ್ಲಿನ (ಸಿಡಬ್ಲ್ಯುಎಂಎ/ಸಿಡಬ್ಕ್ಯುಆರ್ ಸಿ) ರಾಜ್ಯದ ಪ್ರಾತಿನಿಧ್ಯ ತೀರಾ ದುರ್ಬಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

​ಕುಡಿಯುವ ನೀರಿಗಷ್ಟೇ ಲಭ್ಯ: "ನಮ್ಮ ಜಲಾಶಯಗಳಲ್ಲಿ ಪ್ರಸ್ತುತ ಇರುವ ನೀರು ಕರ್ನಾಟಕದ ಕುಡಿಯುವ ನೀರಿನ ಅಗತ್ಯಗಳಿಗೆ ಮಾತ್ರ ಸಾಕಾಗುತ್ತದೆ. ಹೀಗಾಗಿ ಬೇರೆ ಉದ್ದೇಶಗಳಿಗೆ ನೀರು ಬಳಕೆ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡು ನೀರು ಬಿಡುವಂತೆ ಒತ್ತಡ ಹೇರುತ್ತಿದೆ. ಇದು ದೀರ್ಘ ಕಾಲದ ಪ್ರಕರಣವಾಗಿದ್ದರೂ ​ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ರಾಜ್ಯದ ನೈಜ ಪರಿಸ್ಥಿತಿಯನ್ನು ಬಲವಾಗಿ ಮಂಡಿಸುವಲ್ಲಿ ರಾಜ್ಯದ ಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ತಮಿಳುನಾಡು ಪದೇ ಪದೇ ನೀರಿಗಾಗಿ ಒತ್ತಡ ಹೇರುತ್ತಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಜೊತೆಗೆ ಮಾತನಾಡಿದೆ, ಅವರೂ ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಅವರು ಹೇಳಿದರು.

​ರೈತರ ಹಿತರಕ್ಷಣೆ ಮುಖ್ಯ:

"ರಾಜ್ಯದಲ್ಲಿ ಈಗಾಗಲೇ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ರೈತರ ಹಿತ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯ. ನಮ್ಮ ಸರ್ಕಾರದ ಅವಧಿಯಲ್ಲೂ ಇಂತಹ ಆದೇಶಗಳು ಬಂದಾಗ ನಾವು ದೃಢವಾಗಿ ನಿಂತು ನೀರು ಹರಿಸಿರಲಿಲ್ಲ. ಈಗಿನ ಸರ್ಕಾರವೂ ಅದೇ ರೀತಿ ದೃಢ ನಿರ್ಧಾರ ತೆಗೆದುಕೊಂಡು ನಮ್ಮ ರೈತರ ಮತ್ತು ಕುಡಿಯುವ ನೀರಿನ ಹಿತಾಸಕ್ತಿಯನ್ನು ಕಾಯಬೇಕು ಹಾಗೂ ಕಾನೂನು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News