×
Ad

ಬೆಂಗಳೂರು | ಸಾಮಾಜಿಕ ಜಾಲತಾಣದಲ್ಲಿ ರೌಡಿಗಳಿಗೆ ಬಿಲ್ಡಪ್: 8 ಜನರ ವಿರುದ್ಧ ರೌಡಿಶೀಟ್ ತೆರೆದ ಪೊಲೀಸರು

Update: 2025-10-05 21:24 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಅ.5: ಲೈಕ್ಸ್, ಫಾಲೋವರ್ಸ್ ಆಸೆಗೆ ರೌಡಿಗಳ ಬಗ್ಗೆ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಹಾನುಭೂತಿ ಮತ್ತು ಪರಸ್ಪರ ವೈಷಮ್ಯ ಮೂಡಿಸುವಂತಹ ಪೋಸ್ಟ್‌ಗಳನ್ನು ಮಾಡುತ್ತಿದ್ದ ಪ್ರಕರಣ ಸಂಬಂಧ ಓರ್ವ ಯುವತಿ ಸಹಿತ ಎಂಟು ಜನರ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ರೌಡಿಶೀಟ್ ತೆರೆದಿದ್ದಾರೆ.

ದೀಪಕ್(22), ಕುಶಾಲ್(20), ಮನೋಜ್(22), ವೇಣು.ಎನ್(19), ಕುಮಾರಿ ಕೈಸರ್(21), ಮಂಜುನಾಥ್(31), ಶಂಕರ್(32) ಸೇರಿ 8 ಮಂದಿ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ತಿಳಿಸಿದರು.

ಬೆಂಗಳೂರು ದಕ್ಷಿಣ ವಿಭಾಗದಲ್ಲಿನ ರೌಡಿಶೀಟರ್ ಆಗಿರುವ ವಿಲ್ಸನ್ ಗಾರ್ಡನ್ ನಾಗ ಮತ್ತು ಮೃತ ರೌಡಿಶೀಟರ್ ಸಿದ್ಧಾಪುರ ಮಹೇಶನ ತರಹೇವಾರಿ ವೀಡಿಯೋ, ಫೋಟೋಗಳಿಗೆ ಸಿನಿಮಾ ಡೈಲಾಗ್‌ಗಳನ್ನು ಸೇರಿಸುತ್ತಿದ್ದ ಆರೋಪಿಗಳು, ಅವುಗಳನ್ನು ‘ಎನ್ ಬಾಸ್’ ಮತ್ತು ‘ಎಂ ಬಾಸ್’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಅಲ್ಲದೇ ರೌಡಿಶೀಟರ್‌ಗಳನ್ನು ಅಣ್ಣಾ, ಬಾಸು, ಕಿಂಗ್ ಎಂದೆಲ್ಲಾ ಸಂಭೋದಿಸಿ ವೀಡಿಯೋ ಕ್ರಿಯೇಟ್ ಮಾಡಿ ಅವರ ಮೇಲೆ ಸಹಾನುಭೂತಿ ಹಾಗೂ ಅವರ ಹಿಂಬಾಲಕರ ನಡುವೆ ದ್ವೇಷ ಮೂಡಿಸಲು ಕಾರಣವಾಗುತ್ತಿದ್ದರು. ಆರೋಪಿಗಳ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಈ ರೌಡಿ ಫ್ಯಾನ್ಸ್ ಕ್ರೇಜ್‌ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

‘ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳು, ಕಾಮೆಂಟ್‌ಗಳು ಅಥವಾ ರಿ-ಶೇರ್ ಮಾಡಿಕೊಳ್ಳುವಂತಹ ವಿಚಾರಗಳ ಬಗ್ಗೆ ಸಾರ್ವಜನಿಕರು ವಿಶೇಷವಾಗಿ ಕಾಳಜಿವಹಿಸಬೇಕು. ಇದಕ್ಕೆ ಸಂಬಂಧಪಟ್ಟ ಹಾಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಿದ್ದಾಪುರ ಪೊಲೀಸರು ಸ್ವಯಂಪ್ರೇರಿತರಾಗಿ ದೂರು-ಪ್ರತಿದೂರುಗಳನ್ನು ದಾಖಲಿಸಿದ್ದಾರೆ. ಆರೋಪಿಗಳ ಸಾಮಾಜಿಕ ಜಾಲತಾಣದ ಖಾತೆಗಳ ಬಳಕೆದಾರರನ್ನು ಪತ್ತೆ ಹಚ್ಚಿದಾಗ ಹಲವು ವಿದ್ಯಾರ್ಥಿಗಳಿರುವುದು ಬೆಳಕಿಗೆ ಬಂದಿದ್ದು, ಎಚ್ಚರಿಕೆ ನೀಡಲಾಗಿದೆ. ಸದ್ಯ ಎಂಟು ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಕ್ರಮಗಳನ್ನು ಜರುಗಿಸುವ ಕಾರ್ಯ ಮುಂದುವರೆಸುತ್ತೇವೆ’ ಎಂದು ಡಿಸಿಪಿ ಲೋಕೇಶ್ ಬಿ.ಜಗಲಾಸರ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News