×
Ad

ಬೆಂಗಳೂರು | ತಪಾಸಣೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ವೈದ್ಯನಿಗೆ ನ್ಯಾಯಾಂಗ ಬಂಧನ

Update: 2025-10-21 18:02 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಅ.21: ವೈದ್ಯಕೀಯ ತಪಾಸಣೆಯ ನೆಪದಲ್ಲಿ 22 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರಿನ ಖಾಸಗಿ ಕ್ಲಿನಿಕ್‍ನ 56 ವರ್ಷದ ಚರ್ಮರೋಗ ತಜ್ಞರೊಬ್ಬರನ್ನು ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ವರದಿಯಾಗಿದೆ.

ಸಂತ್ರಸ್ತ ಯುವತಿಯು ನೀಡಿದ ದೂರಿನನ್ವಯ ಅಶೋಕನಗರ ಠಾಣಾ ಪೊಲೀಸರು ವೈದ್ಯ ಡಾ.ಪ್ರವೀಣ್ ಎಂಬಾತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 75(ಲೈಂಗಿಕ ಕಿರುಕುಳ) ಮತ್ತು 79(ಮಹಿಳೆಯ ಘನತೆಗೆ ಅವಮಾನ ಮಾಡುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಬಂಧಿತ ವೈದ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅ.18ರ ಶನಿವಾರ ಸಂಜೆ ಅಶೋಕನಗರದಲ್ಲಿರುವ ಖಾಸಗಿ ಕ್ಲಿನಿಕ್‍ಗೆ ಯುವತಿ ತನ್ನ ತಂದೆಯೊಂದಿಗೆ ಚರ್ಮದ ಸೋಂಕಿಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ತಪಾಸಣೆ ವೇಳೆ ಯುವತಿಯ ತಂದೆ ಹೊರಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ವೈದ್ಯ ಡಾ.ಪ್ರವೀಣ್, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸುಮಾರು 30 ನಿಮಿಷಗಳ ಕಾಲ ಆಕೆಗೆ ಕಿರುಕುಳ ನೀಡಿದ್ದಾರೆ. ಚರ್ಮದ ಸೋಂಕನ್ನು ಪರೀಕ್ಷಿಸುವ ನೆಪದಲ್ಲಿ ಪದೇ ಪದೇ ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಅಷ್ಟೇ ಅಲ್ಲದೆ, ವೈದ್ಯಕೀಯ ಪರೀಕ್ಷೆಯ ಭಾಗ ಎಂದು ಹೇಳಿ ಧರಿಸಿದ ಬಟ್ಟೆ ಕಳಚುವಂತೆ ಒತ್ತಾಯಿಸಿದ್ದಾರೆ.  ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಕ್ಲಿನಿಕ್‍ನಲ್ಲಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿಯಾಗಿ ಒಟ್ಟಿಗೆ ಸಮಯ ಕಳೆಯಲು ಹೋಟೆಲ್‍ನಲ್ಲಿ ಕೊಠಡಿ ಬುಕ್ ಮಾಡುವಂತೆ ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಈ ಘಟನೆ ನಡೆದ ನಂತರ ಯುವತಿಯು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆಕೆಯ ಕುಟುಂಬ ಸದಸ್ಯರು ಸ್ಥಳೀಯ ನಿವಾಸಿಗಳೊಂದಿಗೆ ಸೋಮವಾರದಂದು ಕ್ಲಿನಿಕ್ ಹೊರಗೆ ಜಮಾಯಿಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News