×
Ad

Bengaluru | ಯುವತಿಯ ಕತ್ತು ಸೀಳಿ ಹತ್ಯೆ ಪ್ರಕರಣ: ಆರೋಪಿ ವಶಕ್ಕೆ

Update: 2026-06-14 22:01 IST

ಬೆಂಗಳೂರು : ಪ್ರೇಮಿಗಳ ನಡುವೆ ಜಗಳ ಉಂಟಾಗಿ 22 ವರ್ಷದ ಯುವತಿಯನ್ನು ಕತ್ತು ಸೀಳಿ ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ಬೆಳ್ಳಂದೂರು ಠಾಣೆ ಪೊಲೀಸರು ರವಿವಾರ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಮೃತ ಯುವತಿಯನ್ನು ಸಿಕ್ಕಿಂನ ಅಟಿ ಹಂಗ್ಮಾ ಸುಭಾ (22) ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಆರೋಪಿ ಪುರ್ಬಾ ಲೆಪ್ಚಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಒಂದು ವರ್ಷ ಸಿಕ್ಕಿಂನಲ್ಲಿ ಜೊತೆಗಿದ್ದರು. ಬಳಿಕ ಕೆಲಸಕ್ಕಾಗಿ ಒಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ದೊಡ್ಡಕನ್ನಳ್ಳಿಯಲ್ಲಿನ ಅಪಾರ್ಟ್‍ಮೆಂಟ್‍ವೊಂದಲ್ಲಿ ಒಟ್ಟಿಗೆ ವಾಸವಾಗಿದ್ದರು. ಯುವತಿ ಸಲೂನ್‍ವೊಂದರಲ್ಲಿ ರಿಸೆಪ್ಶನಿಸ್ಟ್ ಕೆಲಸಕ್ಕೆ ಸೇರಿದ್ದಳು. ಆರೋಪಿ ನಗರದ ಪ್ರತಿಷ್ಠಿತ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಯುವತಿಗೆ ಮತ್ತೊಬ್ಬ ಯುವಕನ ಜೊತೆ ಸಂಪರ್ಕವಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಜೂ.14ರ ಬೆಳಗ್ಗೆಯೂ ಅದೇ ವಿಚಾರವಾಗಿ ವಾಗ್ವಾದ ನಡೆದಿದೆ. ವಾದ ತೀವ್ರಗೊಂಡಾಗ ಆರೋಪಿ, ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಯುವತಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾಹಿತಿ ನೀಡಿದ್ದಾರೆ.

ಈ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸೈದುಲು ಅಡಾವತ್ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News