×
Ad

ಪ್ರಧಾನಿ ಮೋದಿ ನೇತೃತ್ವದ 12 ಪೂರ್ಣ ವರ್ಷಗಳ ಕಾರ್ಯನಿರ್ವಹಣೆಯು ದಾಖಲೆಗಳ ಅವಧಿ : ನಿರ್ಮಲಾ ಸೀತಾರಾಮನ್

Update: 2026-06-14 18:53 IST

ಬೆಂಗಳೂರು : ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್’ ಜೊತೆಗೆ 2047ರ ವಿಕಸಿತ ಭಾರತದ ಸಂಕಲ್ಪವನ್ನು ಈಡೇರಿಸಲು ದೇಶ ಸಜ್ಜಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ರವಿವಾರ ದೇವನಹಳ್ಳಿ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಜಿಟಲ್ ಪಾವತಿ ವ್ಯವಸ್ಥೆ, ದೇಶಾದ್ಯಂತ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಹಾಗೂ ವಾಯುಕ್ಷೇತ್ರದ ಸಂಪರ್ಕದಲ್ಲಿನ ಕ್ರಾಂತಿ ಮೋದಿ ಸರಕಾರದ ಪ್ರಮುಖ ಕ್ರಾಂತಿಕಾರಿ ಸಾಧನೆಗಳು ಎಂದು ವಿಶ್ಲೇಷಿಸಿದರು.

ಅಮೆರಿಕವು ಬಡ್ಡಿ ದರ ಕಡಿಮೆ ಮಾಡುವುದು, ಅಮೆರಿಕದ ಹಣಕಾಸು ಕ್ಷೇತ್ರದ ಕ್ರಮಗಳು ರೂಪಾಯಿಯ ವಿನಿಮಯ ದರ ಏರುಪೇರಿಗೆ ಕಾರಣವಾಗಿದೆ. ಜಪಾನ್ ಯೆನ್ ಕೂಡ ಡಾಲರ್ ಎದುರು ಮೌಲ್ಯ ಕಳೆದುಕೊಂಡಿದೆ ಎಂದ ಅವರು, ನಾವು ಕಚ್ಚಾ ತೈಲವನ್ನು ಹೊರಗಿನಿಂದ ತರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಾವು ಸ್ವಾವಲಂಬಿಗಳಲ್ಲ. ಇದಕ್ಕೆ ಪಾವತಿಯನ್ನು ಡಾಲರ್‍ನಲ್ಲೇ ಮಾಡಬೇಕಿದೆ. ಎರಡನೇಯದಾಗಿ ಗರಿಷ್ಠ ಪ್ರಮಾಣದ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತೇವೆ. ರಸಗೊಬ್ಬರದ ಆಮದು ವೆಚ್ಚ ಹೆಚ್ಚಾಗುತ್ತಿದೆ ಎಂದರು.

ಕೋವಿಡ್ ಅವಧಿಯಲ್ಲಿ ನಾವು ರಸಗೊಬ್ಬರದ ಚೀಲಕ್ಕೆ ಸುಮಾರು 300ರೂ.ದರ ನಿಗದಿಪಡಿಸಿದ್ದೇವೆ. ಅದೇ ಒಂದು ಚೀಲಕ್ಕೆ ಆಮದು ದರ 3 ಸಾವಿರ ರೂ.ಗಳಿಗೆ ಏರಿದೆ. ಇದರಿಂದ 2700ರೂ.ಗಳಷ್ಟು ಸಬ್ಸಿಡಿಯನ್ನು ಕೇಂದ್ರ ಸರಕಾರವು ನೀಡಬೇಕಿದೆ. ಅಲ್ಲದೇ, ಚಿನ್ನದ ಆಮದು ಮಾಡಿಕೊಂಡು ಡಾಲರ್‍ನಲ್ಲೇ ಪಾವತಿ ನಡೆಯುತ್ತಿದೆ. ಚಿನ್ನದ ಪ್ರತಿ ಔನ್ಸ್ ದರ ರಾಕೆಟ್‍ನಂತೆ ಏರುತ್ತಿದೆ ಎಂದು ಅವರು ತಿಳಿಸಿದರು.

‘ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ಭಾವಿಸಿದರೆ, ಯಾದಗಿರಿ, ಕಲಬುರ್ಗಿ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಕೊಡಬೇಕು?’ ಎಂದು ಪ್ರಶ್ನಿಸಿದ ನಿರ್ಮಲಾ ಸೀತಾರಾಮನ್, ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ಚಿಂತನೆ ಸರಿಯಲ್ಲ. ಮನೆ, ಶೌಚಾಲಯ ನಿರ್ಮಾಣ, ಮನೆ ಮನೆಗೆ ನಲ್ಲಿ(ನಳ) ನೀರು ಮೊದಲಾದ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಕೇಂದ್ರವು ನೆರವಾಗುತ್ತಿದೆ ಎಂದರು.

ಬಿಜೆಪಿ ಕಾರ್ಯಕರ್ತರನ್ನು ಆಧರಿಸಿದ ಪಕ್ಷ. ಜನಸಂಘದ ಸ್ಥಾಪಕ ಬಾಲರಾಜ ಮಧೋಕ್ ಅವರು ಕೆಲ ಸಮಯದ ಬಳಿಕ ಪಕ್ಷ ತೊರೆದಿದ್ದರು. ಕಲ್ಯಾಣ್ ಸಿಂಗ್ ಪಕ್ಷ ತೊರೆದು ಕೆಲ ಸಮಯದ ಬಳಿಕ ಪಕ್ಷಕ್ಕೆ ಮರಳಿದ್ದಾರೆ. ಉಮಾಭಾರತಿ, ಯಡಿಯೂರಪ್ಪನವರು ಒಂದು ಸಂದರ್ಭದಲ್ಲಿ ಪಕ್ಷ ತೊರೆದಿದ್ದರು ಎಂದು ಅವರು, ಅಣ್ಣಮಲೈ ಪಕ್ಷ ತೊರೆದ ವಿಚಾರಕ್ಕೆ ಸಮರ್ಥನೆ ನೀಡಿದರು.

ಪ್ರಧಾನಿ ಮೋದಿ ನೇತೃತ್ವದ 12 ಪೂರ್ಣ ವರ್ಷಗಳ ಕಾರ್ಯನಿರ್ವಹಣೆಯು ದಾಖಲೆಗಳ ಅವಧಿ. ಪ್ರಧಾನಿಯಾಗಿ 4,399 ದಿನಗಳ ಆಡಳಿತದ ಗರಿಷ್ಠ ದಾಖಲೆಯನ್ನೂ ಮೋದಿಯವರು ಮಾಡಿದ್ದಾರೆ. ಈ ಮೂಲಕ ನೆಹರೂ ಅವರ ಚುನಾಯಿತ ಪ್ರಧಾನಿಯಾಗಿ ಅವಧಿಯ ದಾಖಲೆಯನ್ನು ಮುರಿದಿದ್ದಾರೆ ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಶೇ.96 ರಷ್ಟು ವಿದ್ಯುದೀಕೃತ ರೈಲ್ವೆ ವ್ಯವಸ್ಥೆ ಇದೀಗ ಸಾಧ್ಯವಾಗಿದೆ. ಹೊಸ ವಂದೇ ಭಾರತ್ ಎಕ್ಸ್‌ ಪ್ರೆಸ್‍ಗಳನ್ನು ಆರಂಭಿಸಲಾಗಿದೆ. ಏಮ್ಸ್, ಐಐಟಿಗಳನ್ನು ದೇಶಾದ್ಯಂತ ಆರಂಭಿಸಿದ್ದೇವೆ ಎಂದ ಅವರು, ಆದಾಯ ತೆರಿಗೆ ಮಿತಿ 2014ರಲ್ಲಿ 2.5ಲಕ್ಷ ರೂ.ಗಳಿತ್ತು. ಇದೀಗ ಅದನ್ನು 12.75 ಲಕ್ಷ ರೂ.ಗಳಿಗೆ ಏರಿಸಿದ್ದೇವೆ. ಇದು ಮಧ್ಯಮವರ್ಗದವರಿಗೆ ಕೊಟ್ಟ ಕೊಡುಗೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಡಾ. ಕೆ.ಸುಧಾಕರ್, ಕಾರ್ಯದರ್ಶಿ ತಮ್ಮೇಶ್ ಗೌಡ, ಮಾಜಿ ಶಾಸಕ ಚಂದ್ರಣ್ಣ, ಅಂಬರೀಷ್‌ ಗೌಡ, ಬ್ಯಾಟರಂಗೇಗೌಡ, ಎಸ್. ಕೇಶವ ಪ್ರಸಾದ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News