×
Ad

ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಅಶೋಕ್ ನಿಲ್ಲಿಸಬೇಕು : ಎಚ್.ಸಿ.ಬಾಲಕೃಷ್ಣ

Update: 2026-06-14 20:02 IST

ಬೆಂಗಳೂರು : ‘ವಿಧಾನಸಭೆಯ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಅವರು ಕುಬೇರನ ಪುತ್ರನೇ?. ಆತನ ಆಸ್ತಿ ಸಂಪಾದನೆಯ ಬಗ್ಗೆ ಮೊದಲು ತನಿಖೆ ನಡೆಯಲಿ’ ಎಂದು ಕಾಂಗ್ರೆಸ್ ಪಕ್ಷದ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಎಂದಿರುವ ಆರ್.ಅಶೋಕ್ ಹೇಳಿಕೆ ಖಂಡಿಸಿ ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಇನ್ನೂ ರಾಜಕೀಯ ಭವಿಷ್ಯವಿದೆ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಹೊರಟಿದ್ದಾರೆ. ಆದರೆ, ಆರ್. ಅಶೋಕ್ ಅವರು ಮುಖ್ಯಮಂತ್ರಿ ಶಿವಕುಮಾರ್ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ಅಶೋಕ್ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಅಲ್ಲದೆ, ಅಶೋಕ್ ಅವರೇ, ನೀವೇನು ಕುಬೇರನ ಅಥವಾ ಟಾಟಾ-ಬಿರ್ಲಾ ಮಗನಾ, ನೀನು ಮಂತ್ರಿ ಆದ ಮೇಲೆಯೇ ತಾನೇ ಇಷ್ಟೊಂದು ಆಸ್ತಿ ಮಾಡಿದ್ದು. ನಾನು ಎಲ್ಲೂ ಹಣವನ್ನು ಪಡೆದಿಲ್ಲ ಎಂದು ಅಶೋಕ್ ಬಂದು ಪ್ರಮಾಣ ಮಾಡಲಿ, ಇಲ್ಲ ಅವರ ಆಸ್ತಿ ತನಿಖೆ ಆಗಲಿ ಎಂದು ಏಕವಚನದಲ್ಲೇ ಬಾಲಕೃಷ್ಣ ಪ್ರಶ್ನಿಸಿದರು.

ಅಶೋಕ್, ಬೆಂಗಳೂರು ಉಸ್ತುವಾರಿಯಾಗಿದ್ದಾಗ ಕಸದ ಸಮಸ್ಯೆಗೆ ಯಾವುದೇ ತೀರ್ಮಾನ ಮಾಡಲಿಲ್ಲ. ಆಗ ಕಸದ ವಿಲೇವಾರಿಗೆ ಸರಿಯಾದ ತೀರ್ಮಾನ ಮಾಡಿದ್ದರೆ ಅವರು ಚುನಾವಣೆಯಲ್ಲಿ ಹೀಗೆ ಸೋಲುತ್ತಿರಲಿಲ್ಲ. ಬೆಂಗಳೂರಿನಿಂದ ಹೊರಗೆ ಅಭಿವೃದ್ಧಿ ಮಾಡಿ ಎಂದು ಇವರೇ ಭಾಷಣ ಮಾಡುತ್ತಾರೆ, ಈಗ ನಾವು ಹೊರವಲಯದಲ್ಲಿ ಟೌನ್‍ಶಿಪ್ ಮಾಡಲು ಹೋದರೆ ತರಲೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News