ರಾಜ್ಯದಲ್ಲಿ ಹೆಚ್ಚು ಹೂಡಿಕೆ: ಎಂ.ಬಿ.ಪಾಟೀಲ್ ಜೊತೆ ಹಾಂಕಾಂಗ್ ಕಾನ್ಸುಲ್ ಜನರಲ್ ಚರ್ಚೆ
ಬೆಂಗಳೂರು, : ಹಾಂಕಾಂಗ್ ಮೂಲದ ಪ್ರಮುಖ ಕಂಪನಿಗಳು ಕರ್ನಾಟಕದ ನಾನಾ ಕೈಗಾರಿಕಾ ವಲಯಗಳಲ್ಲಿ ಹೆಚ್ಚಿನ ಬಂಡವಾಳ ಹೂಡುವ ಸಂಬಂಧವಾಗಿ ಹಾಂಕಾಂಗ್ ಮತ್ತು ಮಕಾವ್ ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಾಜೇಶ್ ನಾರಾಯಣ ನಾಯಕ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಸೋಮವಾರ ಬೆಂಗಳೂರಿನಲ್ಲಿ ಭೇಟಿಯಾಗಿ, ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ಎಂ.ಬಿ.ಪಾಟೀಲ್, ರಾಜ್ಯಕ್ಕೆ ಬಂಡವಾಳ ಸೆಳೆಯುವ ನಿಟ್ಟಿನಲ್ಲಿ ಭಾರತೀಯ ಕಾನ್ಸುಲೇಟ್ ಜನರಲ್ ಆದಷ್ಟು ತ್ವರಿತವಾಗಿ ಕರ್ನಾಟಕ ಕೇಂದ್ರಿತ ದುಂಡು ಮೇಜಿನ ಸಮಾವೇಶ ಏರ್ಪಡಿಸಬೇಕು ಮತ್ತು ರಾಜ್ಯ ಸರಕಾರದ ಇನ್ವೆಸ್ಟ್ ಕರ್ನಾಟಕ ಉಪಕ್ರಮದೊಂದಿಗೆ ಒಂದು ಕ್ರಿಯಾಶೀಲ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಹಾಂಕಾಂಗ್ ನಲ್ಲಿ ಹೆಚ್ಚಿನ ಉದ್ಯಮಗಳು ಕುಟುಂಬ ಕೇಂದ್ರಿತವಾಗಿವೆ. ಇವುಗಳ ಜತೆಗೆ ಹಣಕಾಸು ಸಂಸ್ಥೆಗಳು, ವೆಂಚರ್ ಕ್ಯಾಪಿಟಲ್ ನಿಧಿಗಳು ಮತ್ತು ಹೂಡಿಕೆದಾರರತ್ತ ನಾವು ನೋಡಬೇಕಿದೆ. ನಮ್ಮಲ್ಲಿ ಇ.ಎಸ್.ಡಿ.ಎಂ, ಸೆಮಿಕಂಡಕ್ಟರ್ಸ್, ನವೋದ್ಯಮಗಳು, ಫಿನ್-ಟೆಕ್, ಶುದ್ಧ ಇಂಧನ, ಜೈವಿಕ ತಂತ್ರಜ್ಞಾನ ಮತ್ತು ಆಧುನಿಕ ತಯಾರಿಕೆ ವಲಯಗಳಲ್ಲಿ ಹೆಚ್ಚಿನ ಹೂಡಿಕೆಗೆ ಹೇರಳ ಅವಕಾಶಗಳಿವೆ. ಇದನ್ನು ಹಾಂಕಾಂಗಿನ ಕಂಪನಿಗಳ ಗಮನಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.
ಹಾಂಕಾಂಗ್ ಸರಕಾರ ಕೂಡ ಹೂಡಿಕೆಯನ್ನು ಉತ್ತೇಜಿಸಲು ‘ಇನ್ವೆಸ್ಟ್ ಎಚ್.ಕೆ’ ಎನ್ನುವ ವ್ಯವಸ್ಥೆಯನ್ನು ರೂಪಿಸಿ, ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ನಮ್ಮಲ್ಲಿರುವ ಚಿಪ್ ವಿನ್ಯಾಸ, ಐಒಟಿ, ಎಲೆಕ್ಟ್ರಾನಿಕ್ಸ್ ಮತ್ತು ನವೋದ್ಯಮ ಕಾರ್ಯಪರಿಸರಗಳನ್ನು ಅಲ್ಲಿನ ಕಂಪನಿಗಳೊಂದಿಗೆ ಬೆಸೆಯಬೇಕಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈಗಾಗಲೇ ಅಲ್ಲಿನ ಲೆನೋವೋ ಕಂಪೆನಿಯ ನೆರವು ಕೇಂದ್ರ ಮತ್ತು ಎಚ್.ಎಸ್.ಬಿ.ಸಿ. ಹಣಕಾಸು ಸಂಸ್ಥೆಯ ಜಾಗತಿಕ ಸೇವಾ ಕೇಂದ್ರ ಎರಡೂ ಬೆಂಗಳೂರಿನಲ್ಲಿ ಬೇರೂರಿದ್ದು, ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ ನಾಯಕ್, ಹಾಂಕಾಂಗ್ ಜಾಗತಿಕ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾಗಿದ್ದು, ಮರುರಫ್ತಿಗೆ ಹೆಸರುವಾಸಿಯಾಗಿದೆ. ಇದನ್ನು ಕರ್ನಾಟಕ ರಾಜ್ಯವು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಒಳ್ಳೆಯ ಅವಕಾಶಗಳಿವೆ. ಅದರಲ್ಲೂ ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಸಾಧನಗಳು ಮತ್ತು ಹೈ-ವ್ಯಾಲ್ಯೂ ತಯಾರಿಕೆಯ ಉತ್ಪನ್ನಗಳ ವಿಭಾಗದಲ್ಲಿ ರಾಜ್ಯಕ್ಕೆ ಸದವಕಾಶಗಳ ಬಾಗಿಲು ತೆರೆದಿದೆ ಎಂದಿದ್ದಾರೆ.
ಹಾಂಕಾಂಗ್ ಭಾರತದೊಂದಿಗೆ 9ನೇ ಅತಿದೊಡ್ಡ ವಿದೇಶಿ ಹೂಡಿಕೆದಾರ ದೇಶವಾಗಿದ್ದು, 2024ರಲ್ಲಿ 25.81 ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. ಭಾರತೀಯ ಕಂಪನಿಗಳು ಚೀನಾದೊಳಕ್ಕೆ ಪ್ರವೇಶಿಸಿ ಹೂಡಿಕೆ ಮಾಡಬೇಕೆಂದರೆ ಅದಕ್ಕೆ ಹಾಂಕಾಂಗ್ ಹೆಬ್ಬಾಗಿಲಾಗಿದೆ. ಈ ವಾಸ್ತವವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದು, ತಮ್ಮ ಸಹಕಾರ ಕೂಡ ಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.