ಬಿಜೆಪಿ-ಆರಸ್ಸೆಸ್ ರಾಮನ ಹೆಸರನ್ನು ಕೇವಲ ಅಧಿಕಾರ ಮತ್ತು ಹಣಕ್ಕಾಗಿ ಬಳಸಿಕೊಳ್ಳುತ್ತಿವೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನೂತನ ಮಂದಿರದ ಕಾಣಿಕೆ ಡಬ್ಬಿಗಳಲ್ಲಿ ನಡೆದಿದೆ ಎನ್ನಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಆರಸ್ಸೆಸ್ ಸಂಘಟನೆಗಳು ರಾಮನ ಹೆಸರನ್ನು ಕೇವಲ ಅಧಿಕಾರ ಮತ್ತು ಹಣಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಮ್ಮ ಸಂಪೂರ್ಣ ರಾಜಕೀಯ ಅಸ್ತಿತ್ವವನ್ನು ರಾಮ ಮಂದಿರದ ಮೇಲೆಯೇ ಕಟ್ಟಿಕೊಂಡಿದ್ದಾರೆ. 1990ರ ದಶಕದಿಂದಲೂ ಆರೆಸ್ಸೆಸ್ ಸಂಘಟನೆಗೆ ರಾಮ ಮಂದಿರದ ಹೆಸರಿನಿಂದಲೇ ಅಸ್ತಿತ್ವದ ನೆಲೆ ಸಿಕ್ಕಿದೆ ಎಂದಿದ್ದಾರೆ.
ಮಂದಿರದಲ್ಲಿ ನಡೆದಿರುವ ಕಾಣಿಕೆ ಕಳ್ಳತನದ (ಚಂದಾ ಚೋರಿ) ಅಪರಾಧವನ್ನು ಮುಚ್ಚಿಹಾಕುವ ಮತ್ತು ರಕ್ಷಿಸುವ ಪ್ರಯತ್ನಗಳು ಎದ್ದುಕಾಣುತ್ತಿವೆ. ಈ ಕಳ್ಳತನದ ಬಗ್ಗೆ ಜನರು ಪ್ರಶ್ನೆ ಮಾಡದಂತೆ ‘ಸಂಯಮ ಕಾಯ್ದುಕೊಳ್ಳಿ’ ಎಂದು ಆರೆಸ್ಸೆಸ್ ಕೇಳುತ್ತಿರುವುದು ಅವರ ನಿಜವಾದ ಮುಖವನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಖಂಡಿಸಿದ್ದಾರೆ.
ಈಗಾಗಲೇ ಪ್ರಶ್ನಾತೀತ ಹಾಗೂ ಅಲುಗಾಡಿಸಲಾಗದ ಅಧಿಕಾರವನ್ನು ಭದ್ರಪಡಿಸಿಕೊಂಡಿರುವ ಕಾರಣಕ್ಕಾಗಿ, ಜನರು ಈಗ ತಮ್ಮನ್ನು ಯಾವುದೇ ಪ್ರಶ್ನೆ ಮಾಡಬಾರದು ಎಂದು ಆರೆಸ್ಸೆಸ್ ಬಯಸುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಸಂಘಟನೆಗಳು ರಾಮನ ಹೆಸರಿನಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅಪಾರವಾಗಿ ಬೆಳೆದಿವೆ. ಕಳ್ಳತನದ ಅಪರಾಧವನ್ನು ರಕ್ಷಿಸುತ್ತಿರುವುದು ಅವರ ಕೇವಲ ಅವಕಾಶವಾದಿತನವನ್ನು ಮಾತ್ರವಲ್ಲ, ಅವರ ಅಧಿಕಾರದ ಹಸಿವು ಮತ್ತು ಕೋಟ್ಯಂತರ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅವರು ಖಂಡಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಜನರು ಏನನ್ನು ಶಂಕಿಸುತ್ತಿದ್ದರೋ ಅದು ಇಂದು ನಿಜವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‍ಗೆ ರಾಮ ಮಂದಿರ ಎಂಬುದು ಎಂದಿಗೂ ಶ್ರದ್ಧೆ ಅಥವಾ ಭಕ್ತಿಯ ವಿಷಯವಾಗಿರಲಿಲ್ಲ, ಬದಲಿಗೆ ಅದು ಕೇವಲ ಅಧಿಕಾರ ಮತ್ತು ಹಣ ಗಳಿಸುವ ಯಂತ್ರವಾಗಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.