‘ಎಸ್‍ಐಆರ್’ ರಾಜ್ಯದಲ್ಲಿ ಈವರೆಗೆ ನಡೆದ ಪ್ರಕ್ರಿಯೆ ರದ್ದುಗೊಳಿಸಿ: ಬಿಜೆಪಿ-ಜೆಡಿಎಸ್ ನಿಯೋಗ ಒತ್ತಾಯ
ಬೆಂಗಳೂರು : ರಾಜ್ಯಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ಆರಂಭವಾಗಿದ್ದು, ಕಾಂಗ್ರೆಸ್ ಸರಕಾರದ ಷಡ್ಯಂತ್ರದಿಂದ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಹೀಗಾಗಿ ರಾಜ್ಯದಲ್ಲಿ ಈವರೆಗೆ ನಡೆದ ಎಸ್‍ಐಆರ್ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಬಿಜೆಪಿ-ಜೆಡಿಎಸ್ ಪಕ್ಷಗಳ ಎನ್‍ಡಿಎ ಮೈತ್ರಿಕೂಟವು ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಎನ್‍ಡಿಎ ನಿಯೋಗವು ದೂರು ಸಲ್ಲಿಸಿದ್ದು, ಎಸ್‍ಐಆರ್ ಅಕ್ರಮ ಕುರಿತು ತ್ವರಿತವಾಗಿ, ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಕ್ರಮಗಳು ನಡೆದ ಪ್ರದೇಶಗಳಲ್ಲಿ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿ ಮತ್ತು ಕಾರ್ಯವಿಧಾನಗಳ ಮೂಲಕವೇ ಎಸ್‍ಐಆರ್ ನಡೆಯಬೇಕು. ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಬೇಕು. ಹಾಗಿದ್ದರೂ, ಹಲವೆಡೆ ಈ ನಿಯಮಗಳನ್ನು ಪಾಲಿಸದೆ ಸಮುದಾಯ ಭವನ, ಮಸೀದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ನಿವಾಸಗಳಲ್ಲೆ ಅರ್ಜಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಎನ್‍ಡಿಎ ಮುಖಂಡರು ಆರೋಪಿಸಿದರು.
ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಎಸ್‍ಐಆರ್ ಪ್ರಕ್ರಿಯೆಗೆ ವಾಟ್ಸಪ್ ಗುಂಪುಗಳನ್ನು ರಚಿಸಿ, ಮತದಾರರನ್ನು ಒಂದು ಪ್ರದೇಶಕ್ಕೆ ಕರೆಸಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಈ ಎಲ್ಲ ಬೆಳವಣಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆ ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಎಸ್‍ಐಆರ್ ಅಕ್ರಮ ಪ್ರಕರಣದ ಕುರಿತು ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು. ಈಗಾಗಲೇ ಭರ್ತಿ ಮಾಡಿರುವ ಎಲ್ಲ ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಮರು ಪರಿಶೀಲನೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.
ಎಸ್‍ಐಆರ್ ಪ್ರಕ್ರಿಯೆ ವಿಫಲಗೊಳಿಸುವ ತಂತ್ರ ಇದಾಗಿದೆ. ಬಂಗಾಳದಲ್ಲಿ ಎಸ್‍ಐಆರ್ ಆದ ಬಳಿಕ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದಿಂದ ಬಾಂಗ್ಲಾ ದೇಶದವರನ್ನು ಮತಪಟ್ಟಿಗೆ ಸೇರಿಸಲು ಅವಕಾಶ ನೀಡಿದ್ದಾರೆ. ಈಗಾಗಲೇ ಸುಪ್ರೀಂ ಕೋರ್ಟ್ ಎಸ್‍ಐಆರ್ ಮಾಡಲು ಅವಕಾಶ ಇದೆ ಎಂದಿದೆ. ಅಪ್ಪ, ಅಮ್ಮ, ಕುಟುಂಬದವರಿಗೆ ಮಾತ್ರ ಅವಕಾಶ ಇದೆ. ಆದರೆ ಸಂಬಂಧಿಕರೂ ಆಗಬಹುದೆಂದು ಮಾಡಿದ್ದಾರೆ. ಇದನ್ನು ಕುತಂತ್ರದಿಂದ ಮಾಡುತ್ತಿದ್ದಾರೆ ಎಂದು ಜೋಶಿ ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೇರೆ ಬೇರೆ ರಾಜ್ಯಗಳಲ್ಲಿ ಎಸ್‍ಐಆರ್ ನಡೆದಾಗ ಅಕ್ರಮಗಳು ನಡೆದಿದೆ ಎಂದು ಅಪಪ್ರಚಾರ ನಡೆಸಿದ ಕಾಂಗ್ರೆಸ್ ಕರ್ನಾಟಕದಲ್ಲಿ ಮಾಡುತ್ತಿರುವುದಾದರೂ ಏನು? ಅಧಿಕಾರ ಇದೆ ಎಂದು ಆಡಳಿತ ಯಂತ್ರವನ್ನು ದುರ್ಬಳಿಕೆ ಮಾಡಿಕೊಂಡು ಕಳ್ಳ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದೆ ಎಂದರು.
ರಾಜ್ಯದಲ್ಲಿ ಈವರೆಗೆ ಆಗಿರುವ ಮತದಾರ ಪಟ್ಟಿಯ ತೀವ್ರ ಪರಿಷ್ಕರಣೆಯ ಎಲ್ಲ ಪ್ರಕ್ರಿಯೆಗಳನ್ನು ರದ್ದು ಮಾಡಬೇಕು. ಹೊರ ರಾಜ್ಯದ ದಕ್ಷ ಅಧಿಕಾರಿಯನ್ನು ರಾಜ್ಯದ ಎಸ್‍ಐಆರ್ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೋರಲಾಗಿದೆ. ದಿಲ್ಲಿಯಲ್ಲಿಯೂ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.
ನಿಯೋಗದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರ ನಾಯಕರು ಇದ್ದರು.