ಬೆಂಗಳೂರು : ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗದ ಕೆಲ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ಕಂದಾಯ ವಿಭಾಗವನ್ನು ರಚಿಸಬೇಕು ಎಂದು ‘ತುಳು ಸಾಹಿತ್ಯ ಅಕಾಡೆಮಿ’ಯ ಕಾರ್ಯಕ್ರಮದಲ್ಲಿ ಒಕ್ಕೊರಲಿನಿಂದ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಮಾತಾ ತುಳು ಸಂಘಟನೆ ವತಿಯಿಂದ ನಡೆದ ತುಳು ಮಾನ್ಯತೆ ಸಂಭ್ರಮ, ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಳು ನಾಡಿನ ವಿವಿಧ ಕ್ಷೇತ್ರಗಳ ಸಾಧಕರು ತಮ್ಮ ಭಾಷೆಯ ಹಿರಿಮೆಯ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ, ಕು.ಶಿ. ಹರಿದಾಸಭಟ್ಟ, ಕೆ.ಚಿನ್ನಪ್ಪಗೌಡ, ಬಿ.ಎ.ವಿವೇಕ ರೈ ಸೇರಿ ಹಲವರನ್ನು ಹೆಮ್ಮೆಯಿಂದ ಸ್ಮರಿಸಲಾಯಿತು. ಅದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ವಿತರಣೆ ಕಾರ್ಯಕ್ರಮವು ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

ಇದೇ ವೇಳೆ ಮಾತನಾಡಿದ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ‘ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಸ್ಥಾನಮಾನ ದೊರೆತಿರುವುದು ತುಳುವರ ಅನೇಕ ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ’ ಎಂದರು.

ತುಳು ನಮ್ಮ ಮಾತೃಭಾಷೆಯಷ್ಟೇ ಅಲ್ಲ, ಇತಿಹಾಸ, ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಅಸ್ಮಿತೆಯ ಪ್ರತೀಕ. ತುಳು ಭಾಷೆಯ ಉಳಿವು, ಬೆಳವಣಿಗೆಯು ವೇಗ ಪಡೆಯಲಿದೆ. ಈ ಹೋರಾಟದಲ್ಲಿ ಹಲವು ಲೇಖಕರು, ಸಾಹಿತಿಗಳು, ಕಲಾವಿದರು, ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಜೊತೆಯಾಗಿದ್ದಾರೆ ಎಂದು ತಾರಾನಾಥ್ ಗಟ್ಟಿ ತಿಳಿಸಿದರು.

ಸಂಶೋಧಕಿ ಇಂದಿರಾ ಹೆಗ್ಡೆ ಮಾತನಾಡಿ, ಬಳಸದಿದ್ದರೆ ಯಾವುದೇ ಭಾಷೆ ಮತ್ತು ಅದು ಒಳಗೊಳ್ಳುವ ಸಂಸ್ಕೃತಿ ನಾಶವಾಗುತ್ತದೆ. ತುಳುವನ್ನು ಸಮುದಾಯದ ಎಲ್ಲರೂ ಬಳಸಬೇಕು. ಮಕ್ಕಳಲ್ಲಿ ಪ್ರೀತಿ ಅಭಿಮಾನ ಬೆಳೆಸಬೇಕು ಎಂದು ಪ್ರತಿಪಾದಿಸಿದರು.

ಪ್ರಶಸ್ತಿ ಪ್ರದಾನ:

2025ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರೊ.ಬಿ.ಶಿವರಾಮಶೆಟ್ಟಿ (ಸಾಹಿತ್ಯ-ಸಂಶೋಧನೆ), ಕುಡ್ಡು ಕೊರಗ(ಜಾನಪದ), ಉಷಾ ಭಂಡಾರಿ(ತುಳು ಸಿನಿಮಾ-ನಾಟಕ), 2026ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅದೇ ಕ್ಷೇತ್ರಗಳಲ್ಲಿ ಕ್ರಮವಾಗಿ ಕೆ.ಪಿ.ರಾವ್, ನೇಮು ಪರವ ಮತ್ತು ಸುಧಾಕರ ಬನ್ನಂಜೆ ಅವರಿಗೆ ಪ್ರದಾನ ಮಾಡಲಾಯಿತು.

2024ನೇ ಸಾಲಿನ ಪುಸ್ತಕ ಬಹುಮಾನವನ್ನು ಯಶೋಧಾ ಮೋಹನ್ ಮತ್ತು ಅಕ್ಷತಾ ರಾಜ್ ಪೆರ್ಲ, 2025ನೇ ಸಾಲಿನ ಪುಸ್ತಕ ಬಹುಮಾನವನ್ನು ಅಶೋಕ ಎನ್. ಕಡೇಶಿವಾಲಯ ಮತ್ತು ರೂಪಕಲಾ ಆಳ್ವಾ ಅವರಿಗೆ ಪ್ರದಾನ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor