Bengaluru | ಲೇಡಿಸ್ ಪಿಜಿಗೆ ನುಗ್ಗಿ ಅಸಭ್ಯ ವರ್ತನೆ ಆರೋಪ: ಮಹಜರಿಗೆ ತೆರಳಿದ್ದಾಗ ಪರಾರಿಗೆ ಯತ್ನ ; ಆರೋಪಿ ಕಾಲಿಗೆ ಗುಂಡೇಟು
ಆರೋಪಿಯನ್ನು ಪೆಟ್ಟಂ ನರೇಶ್
ಬೆಂಗಳೂರು: ಲೇಡಿಸ್ ಪಿಜಿಗಳಿಗೆ ನುಗ್ಗಿ ಯುವತಿಯರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡ ಆರೋಪಿಯನ್ನು ಪೆಟ್ಟಂ ನರೇಶ್ ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಲೇಡಿಸ್ ಪಿಜಿಯೊಂದಕ್ಕೆ ನುಗ್ಗಿದ್ದ ಪೆಟ್ಟಂ ನರೇಶ್, ಮೊಬೈಲ್ ಕಳವು ಮಾಡಿ ಯುವತಿಯರಿಗೆ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಮಹಜರಿಗೆ ತೆರಳಿದ್ದಾಗ ಪರಾರಿಗೆ ಯತ್ನ
ಬಂಧಿತ ಆರೋಪಿಯನ್ನು ಪೊಲೀಸರು ಮಹಜರು ನಡೆಸುವ ಸಲುವಾಗಿ ಇಂದು ಕುದುರಗೆರೆ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆಗ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.